ಕಂಗನಾ ವಿರುದ್ದ ಜಾವೇದ್ ಅಖ್ತರ್ ದಾಖಲಿಸಿರುವ ಮಾನಹಾನಿ ಮೊಕದ್ದಮೆ ವಿಚಾರಣೆಗೆ ತಡೆ ನೀಡಲು ಬಾಂಬೆ ಹೈಕೋರ್ಟ್ ನಕಾರ

Update: 2024-02-02 14:32 GMT

 ಜಾವೇದ್ ಅಖ್ತರ್ , ಕಂಗನಾ  | Photo: PTI 

ಮುಂಬೈ: ಗೀತೆ ರಚನೆಕಾರ ಜಾವೇದ್ ಅಖ್ತರ್ ಅವರು ದಾಖಲಿಸಿರುವ ಮಾನಹಾನಿ ಮೊಕದ್ದಮೆಯ ವಿಚಾರಣೆಗೆ ತಡೆ ನೀಡುವಂತೆ ಬಾಲಿವುಡ್ ನಟಿ ಕಂಗನಾ ರಣಾವತ್ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಬಾಂಬೆ ಹೈಕೊರ್ಟ್ ವಜಾಗೊಳಿಸಿದೆ.

ಜಾವೇದ್ ಅಖ್ತರ್ ಅವರು ದಾಖಲಿಸಿರುವ ಮೊಕದ್ದಮೆಯ ವಿಚಾರಣೆಯ ಈಗಾಗಲೇ ಪ್ರಾರಂಭಗೊಂಡಿರುವುದರಿಂದ, ಈ ಹಂತದಲ್ಲಿ ಕಂಗನಾ ರಣಾವತ್ ಕೋರಿರುವ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂದು ನ್ಯಾ. ಪಿ.ಡಿ.ನಾಯಕ್ ಅವರನ್ನೊಳಗೊಂಡ ಏಕಸದಸ್ಯ ಪೀಠವು ಹೇಳಿತು.

2020ರಲ್ಲಿ ಜಾವೇದ್ ಅಖ್ತರ್ ಅವರು ದಾಖಲಿಸಿದ್ದ ಕ್ರಿಮಿನಲ್ ಮಾನಹಾನಿ ಮೊಕದ್ದಮೆಯ ವಿಚಾರಣೆಗೆ ತಡೆ ನೀಡಬೇಕು ಹಾಗೂ ಅವರ ವಿರುದ್ಧ ತಾನು ಸಲ್ಲಿಸಿರುವ ದೂರನ್ನು ಜೊತೆಜೊತೆಗೆ ವಿಚಾರಣೆ ನಡೆಸಬೇಕು ಎಂದು ಕಳೆದ ತಿಂಗಳು ನಟಿ ಕಂಗನಾ ರಣಾವತ್ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, “ಅಖ್ತರ್ ದೂರಿನ ಕುರಿತು ಈಗಾಗಲೇ ವಿಚಾರಣೆ ಪ್ರಾರಂಭಗೊಂಡಿದೆ. ಈ ಹಂತದಲ್ಲಿ ಅರ್ಜಿದಾರರು ಸಲ್ಲಿಸಿರುವ ಅರ್ಜಿಯನ್ನು ವಿಳಂಬಿತ ಹಂತ ಎಂದು ಪರಿಗಣಿಸಲಾಗುತ್ತಿದೆ. ಅಖ್ತರ್ ದೂರು ಪ್ರಥಮ ಆದ್ಯತೆಯದಾಗಿದ್ದು, ಈ ಸಂಬಂಧ ನೋಟಿಸ್ ಜಾರಿಗೊಳಿಸಲಾಗಿದೆ. ವಾಸ್ತವ ಸಂಗತಿಗಳನ್ನು ಪರಿಗಣಿಸಿ, ಯಾವುದೇ ಪರಿಹಾರವನ್ನು ನೀಡಲು ಸಾಧ್ಯವಿಲ್ಲ” ಎಂದು ಹೇಳಿದೆ.

ಕಂಗನಾ ರಣಾವತ್ ವಿರುದ್ಧ ಜಾವೇದ್ ಅಖ್ತರ್ ದಾಖಲಿಸಿರುವ ಮಾನಹಾನಿ ಮೊಕದ್ದಮೆಯು ಅಂಧೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ, ಕಂಗನಾ ರಣಾವತ್ ಅವರು ಜಾವೇದ್ ಅಖ್ತರ್ ವಿರುದ್ಧ ದಾಖಲಿಸಿರುವ ದೂರಿಗೆ ಸೆಷನ್ಸ್ ನ್ಯಾಯಾಲಯವು ತಡೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News