ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ: ಎಫ್‌ಐಆರ್‌ನಲ್ಲಿ ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ಹೆಸರು

Update: 2024-03-17 16:07 GMT

ಭೂಪೇಶ ಬಘೇಲ್ | Photo Credit: ANI

ರಾಯಪುರ, ಮಾ.17: ಛತ್ತೀಸ್‌ಗಢ ಪೋಲಿಸರು ಮಹಾದೇವ್ ಬೆಟ್ಟಿಂಗ್ ಆ್ಯಪ್ ಹಗರಣದಲ್ಲಿ ದಾಖಲಿಸಿರುವ ಎಫ್‌ಐಆರ್‌ನಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಭೂಪೇಶ ಬಘೇಲ್ ಅವರನ್ನು ಓರ್ವ ಆರೋಪಿಯನ್ನಾಗಿ ಹೆಸರಿಸಿದ್ದಾರೆ.

ಬಘೇಲ್ ಜೊತೆಗೆ ಅವರ ಅಧಿಕಾರಾವಧಿಯಲ್ಲಿನ ‘ಅನಾಮಿಕ’ ಅಧಿಕಾರಿಗಳು,ಪೋಲಿಸ್ ಅಧಿಕಾರಿಗಳು ಮತ್ತು ವಿಶೇಷ ಕರ್ತವ್ಯಾಧಿಕಾರಿಗಳನ್ನೂ ಆರೋಪಿಗಳನ್ನಾಗಿ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ.

ಹೆಚ್ಚುವರಿಯಾಗಿ ಮಹಾದೇವ ಆ್ಯಪ್ನ ಇಬ್ಬರು ಪ್ರಮುಖ ಪ್ರವರ್ತಕರಾದ ಸೌರಭ ಚಂದ್ರಾಕರ್ ಮತ್ತು ರವಿ ಉಪ್ಪಳ ಹಾಗೂ ಇತರ 16 ಆರೋಪಿಗಳನ್ನು ಎಫ್‌ಐಆರ್‌ನಲ್ಲಿ ಪಟ್ಟಿ ಮಾಡಲಾಗಿದೆ.

‘ಮಹಾದೇವ ಆನ್ಲೈನ್ ಬುಕ್ ’ ಬೆಟ್ಟಿಂಗ್ ಆ್ಯಪ್ ಪೋಕರ್,ಕ್ರಿಕೆಟ್,ಟೆನಿಸ್ ಮತ್ತು ಫುಟ್ಬಾಲ್ಗಳಂತಹ ನೇರ ಪ್ರಸಾರದ ಕ್ರೀಡೆಗಳಲ್ಲಿ ಹಾಗೂ ಭಾರತದಲ್ಲಿಯ ಚುನಾವಣೆಗಳ ಮೇಲೆ ಬಾಜಿ ಕಟ್ಟಲು ಕಾನೂನುಬಾಹಿರವಾಗಿ ಅವಕಾಶವನ್ನು ಒದಗಿಸಿತ್ತು. ನವೆಂಬರ್ ನಲ್ಲಿ ಕೇಂದ್ರ ಸರಕಾರವು ಆ್ಯಪ್ ವಿರುದ್ಧ ನಿರ್ಬಂಧ ಆದೇಶಗಳನ್ನು ಹೊರಡಿಸಿತ್ತು.

ಮಹಾದೇವ ಬೆಟ್ಟಿಂಗ್ ಆ್ಯಪ್ ಮತ್ತು ಅದರ ಸಹವರ್ತಿ ಕಂಪನಿಗಳು ಪ್ರತಿ ತಿಂಗಳು 450 ಕೋ.ರೂ.ಗಳಷ್ಟು ಹಣವನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದವು ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.

ಜನವರಿಯಲ್ಲಿ ಜಾರಿ ನಿರ್ದೇಶನಾಲಯ (ಈ.ಡಿ.) ಮಹಾದೇವ ಆ್ಯಪ್ನ ಪ್ರವರ್ತಕರಿಂದ ಸುಮಾರು 508 ಕೋ.ರೂ.ಗಳ ಲಂಚವನ್ನು ಪಡೆದಿದ್ದ ಆರೋಪಕ್ಕೆ ಸಂಬಂಧಿಸಿದಂತೆ ತನ್ನ ಪೂರಕ ದೋಷಾರೋಪ ಪಟ್ಟಿಯಲ್ಲಿಬಘೇಲ್ ರವರನ್ನು ಹೆಸರಿಸಿತ್ತು.

ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಮೊದಲ ಹಂತದ ನಾಲ್ಕು ದಿನಗಳ ಮುನ್ನ ನ.3ರಂದು ಅಸೀಮ್ ದಾಸ್ ಮತ್ತು ಕಾನ್ಸ್ಟೇಬಲ್ ಭೀಮಸಿಂಗ್ ಯಾದವ ಅವರನ್ನು ಬಂಧಿಸಿದ್ದ ಈ.ಡಿ.5.39 ಕೋ.ರೂ.ನಗದು ಹಣವನ್ನು ವಶಪಡಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮಹಾದೇವ ಆ್ಯಪ್ನ ಪ್ರವರ್ತಕರು ಯುಎಇಯಿಂದ ಕ್ಯಾಷ್ ಕೊರಿಯರ್ ಮೂಲಕ ಬಘೇಲ್ಗೆ 508 ಕೋ.ರೂ.ಗಳನ್ನು ಪಾವತಿಸಿದ್ದರು ಎಂದು ಈ.ಡಿ.ಆರೋಪಿಸಿತ್ತು.

ಈ.ಡಿ.ಯ ಪ್ರಕಾರ, ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ಓರ್ವನಾಗಿರುವ ಶುಭಂ ಸೋನಿಯ ಸೂಚನೆಯ ಮೂಲಕ ಕಾಂಗ್ರೆಸ್ ಪಕ್ಷದ ‘ಹಿರಿಯ ರಾಜಕೀಯ ಅಧಿಕಾರಿಗಳಿಗೆ ’ಹಣವನ್ನು ವಿತರಿಸಲು ತಾನು ರಾಯಪುರಕ್ಕೆ ಬಂದಿದ್ದಾಗಿ ದಾಸ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದರು. 

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News