ಪ್ರಶ್ನೆಗಳಿಗಾಗಿ ಲಂಚ ಪ್ರಕರಣ: ನ.2ರಂದು ತನ್ನ ಮುಂದೆ ಹಾಜರಾಗುವಂತೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಲೋಕಸಭಾ ನೀತಿಸಮಿತಿ ಸೂಚನೆ
ಹೊಸದಿಲ್ಲಿ: ಲೋಕಸಭೆಯ ನೀತಿ ಸಮಿತಿಯು ಅ.31ರ ಬದಲು ನ.2ರಂದು ತನ್ನೆದುರು ಹಾಜರಾಗುವಂತೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರಿಗೆ ಶನಿವಾರ ಸೂಚಿಸಿದೆ. ಗಡುವನ್ನು ಇನ್ನಷ್ಟು ವಿಸ್ತರಿಸುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ತನ್ನ ವಿರುದ್ಧದ ಆರೋಪಗಳ ತನಿಖೆ ನಡೆಸುತ್ತಿರುವ ನೀತಿ ಸಮಿತಿಗೆ ಶುಕ್ರವಾರ ಪತ್ರ ಬರೆದಿದ್ದ ಮೊಯಿತ್ರಾ,ಅ.31ರಂದು ಅದರೆದುರು ಹಾಜರಾಗಲು ತನ್ನ ಅಸಮರ್ಥತೆಯನ್ನು ವ್ಯಕ್ತಪಡಿಸಿದ್ದರು ಮತ್ತು ನ.5ರ ಬಳಿಕವಷ್ಟೇ ತಾನು ಲಭ್ಯವಿರುವುದಾಗಿ ತಿಳಿಸಿದ್ದರು.
ಉದ್ಯಮಿ ಹಿರಾನಂದನಿಯವರ ಸೂಚನೆಯ ಮೇರೆಗೆ ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ಮೊಯಿತ್ರಾ ಲಂಚ ಮತ್ತು ಉಡುಗೊರೆಗಳನ್ನು ಸ್ವೀಕರಿಸಿದ್ದರು ಎಂದು ಬಿಜೆಪಿ ಸಂಸದ ನಿಶಿಕಾಂತ ದುಬೆ ಮಾಡಿರುವ ಆರೋಪಗಳ ತನಿಖೆಯನ್ನು ನೀತಿ ಸಮಿತಿಯು ನಡೆಸುತ್ತಿದೆ.
ಗುರುವಾರ ದುಬೆ ಮತ್ತು ವಕೀಲ ಜೈ ಅನಂತ ದೇಹದ್ರಾಯ್ ಅವರು ಸಮಿತಿಯ ಮುಂದೆ ಹಾಜರಾಗಿ ಮೌಖಿಕ ಸಾಕ್ಷ್ಯವನ್ನು ನೀಡಿದ್ದರು.
‘ದುಬೆ ಮತ್ತು ದೇಹದ್ರಾಯ್ ನನ್ನ ವಿರುದ್ಧ ಮಾಡಿರುವ ಸುಳ್ಳು,ದುರುದ್ದೇಶಪೂರಿತ ಮತ್ತು ಮಾನಹಾನಿಕರ ಆರೋಪಗಳ ಬಗ್ಗೆ ನ್ಯಾಯಸಮ್ಮತ ವಿಚಾರಣೆ ನಡೆಯಬೇಕು ಮತ್ತು ಆರೋಪಗಳ ವಿರುದ್ಧ ನನ್ನನ್ನು ಸಮರ್ಥಿಸಿಕೊಳ್ಳಲು ಸಾಕಷ್ಟು ಅವಕಾಶವನ್ನು ನೀಡಬೇಕು ’ ಎಂದು ಮೊಯಿತ್ರಾ ಹೇಳಿದ್ದಾರೆ.