ವಿನೇಶ್‌ರ ಒಲಿಂಪಿಕ್ ಅನರ್ಹತೆಯನ್ನು ಬ್ರಿಜ್‌ಭೂಷಣ್ ಸಂಭ್ರಮಿಸುತ್ತಿದ್ದಾರೆ : ಬಜರಂಗ್ ಪುನಿಯಾ ಆಕ್ರೋಶ
ಹೊಸದಿಲ್ಲಿ :ಕುಸ್ತಿಪಟು ವಿನೇಶ್‌ಪೋಗಟ್ ಅವರು ಪ್ಯಾರಿಸ್ ಒಲಿಂಪಿಕ್‌ನಲ್ಲಿ ಅನರ್ಹಗೊಂಡಿರುವುದಕ್ಕೆ ಯೋಗ್ಯರೆಂದು ಹೇಳಿದ್ದ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮಾಜಿ ವರಿಷ್ಠ ಹಾಗೂ ಬಿಜೆಪಿ ನಾಯಕ ಬ್ರಿಜ್‌ಭೂಷಣ್ ವಿರುದ್ಧ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಮಾಜಿ ಕುಸ್ತಿಪಟು ಬಜರಂಗ ಪುನಿಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಬಗೆಗೆ ಬ್ರಿಜ್‌ಭೂಷಣ್‌ಸಿಂಗ್‌ಗಿರುವ ಮನಸ್ಥಿತಿಯನ್ನು ಆತನ ಈ ಹೇಳಿಕೆ ಅನಾವರಣಗೊಳಿಸಿದೆ. ವಿನೇಶ್‌ಗೆ ಕೈತಪ್ಪಿದುದು ಅವರ ಪದಕವಲ್ಲ. ಅದು 140 ಕೋಟಿ ಭಾರತೀಯರ ಪದಕವಾಗಿದೆ. ಆದರೆ ಆಕೆಗಾದ ನಷ್ಟವನ್ನು ಆತ (ಬ್ರಿಜ್‌ಭೂಷಣ್) ಸಂಭ್ರಮಿಸುತ್ತಿದ್ದಾರೆ ಎಂದು ಪುನಿಯಾ ಹೇಳಿದ್ದಾರೆ.
‘ಇಂಡಿಯಾಟುಡೇ’ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ವಿನೇಶ್‌ರ ಒಲಿಂಪಿಕ್ ಅನರ್ಹತೆಯನ್ನು ಸಂಭ್ರಮಿಸುವವರು ದೇಶಭಕ್ತರೇನು? ಚನಾವು ಬಾಲ್ಯದಿಂದಲೂ ದೇಶಕ್ಕಾಗಿ ಹೋರಾಡಿದ್ದೇವೆ. ಆದರೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗುವವರು ಈಗ ನಮಗೆ ದೇಶಭಕ್ತಿಯ ಪಾಠವನ್ನು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿಯು ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರನ್ನು ರಕ್ಷಿಸುತ್ತಿದೆ ಹಾಗೂ ಅವರ ವಿರುದ್ಧ ಮಾತನಾಡುವ ಕುಸ್ತಿಪಟುಗಳ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಛೂಬಿಡುತ್ತಿದೆ ಎಂದವರು ಆಪಾದಿಸಿದರು.
ಬ್ರಿಜ್‌ಭೂಷಣ್ ವಿರುದ್ಧ ಕಳ್ಳತನದಿಂದ ಹಿಡಿದು ದೇಶದ್ರೋಹದವರೆಗಿನ ಆರೋಪಗಳಿದ್ದು, ಆತನೊಬ್ಬ ಅಪರಾಧ ಚರಿತ್ರೆಯಿರುವ ವ್ಯಕ್ತಿ. ಆದರೂ ಆತನನ್ನು ಬಿಜೆಪಿ ಬೆಂಬಲಿಸುತ್ತಿದೆ. ಈಗ ನನಗೆ ಪ್ರಧಾನಿ ಮೋದಿ ಬಗ್ಗೆ ಯಾವುದೇ ಭರವಸೆ ಇಲ್ಲ. ನನ್ನ ವಿರುದ್ಧ ಏಜೆನ್ಸಿಗಳನ್ನು ಬಳಸಲಾಗುತ್ತಿದೆ. ಮಾದಕದ್ರವ್ಯ ಸೇವನೆ ಆರೋಪ ಹೊರಿಸಿ ಕುಸ್ತಿ ಸ್ಪರ್ಧೆಯಿಂದ ನನ್ನನ್ನು ನಿಷೇಧಿಸಲಾಗಿದೆ. ಭಾರತೀಯ ಕುಸ್ತಿ ಫೆಡರೇಶನ್‌ನ ಅಧ್ಯಕ್ಷರ ಬಗ್ಗೆಯೂ ನನಗೆ ಯಾವುದೇ ಭರವಸೆಯಿಲ್ಲ ಎಂದು ಪುನಿಯಾ ಹೇಳಿದ್ದಾರೆ.
ಅತ್ಯಂತ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿದ್ದರಿಂದ ಆ ಪಕ್ಷವನ್ನು ತಾನು ಸೇರಿರುವುದಾಗಿ ಪುನಿಯಾ ಸಂದರ್ಶನದಲ್ಲಿ ಸ್ಪಷ್ಟಪಡಿಸಿದರು. ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ನೀಡಿದ್ದ ಕಾಂಗ್ರೆಸ್, ಆಪ್ ಮತ್ತಿತರ ಪ್ರತಿಪಕ್ಷಗಳಿಗೆ ಅವರು ಕೃತಜ್ಞತೆಯನ್ನು ಸಲ್ಲಿಸಿದರು.
ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲವೆಂದು ಪುನಿಯಾ ಸ್ಪಷ್ಟಪಡಿಸಿದರು. ಆದರೆ ವಿನೇಶ್ ಫೋಗಟ್ ಸ್ಪರ್ಧಿಸಲಿದ್ದಾರೆ ಎಂದರು. ರಾಜ್ಯಸಭೆಗೆ ನಾಮಕರಣಗೊಳ್ಳಲಿದ್ದಾರಾ ಎಂಬ ಪ್ರಶ್ನೆಗೆ ಪುನಿಯಾ ಅವರು ಅದನ್ನು ಪಕ್ಷವು ನಿರ್ಧರಿಸಬೇಕಿದೆ ಎಂದು ಹೇಳಿದರು.
ವಿನೇಶ್ ಫೋಗಟ್ ಹಾಗೂ ಬಜರಂಗ ಪುನಿಯಾ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಬೆನ್ನಲ್ಲೇ ಬ್ರಿಜ್‌ಭೂಷಣ್ ಶರಣ್ ಸಿಂಗ್ ಹೇಳಿಕೆಯೊಂದನ್ನು ನೀಡಿ, ವಿನೇಶ್ ಅವರು ಇನ್ನೋರ್ವ ಮಹಿಳಾ ಕುಸ್ತಿಪಟುವಿನ ಜಾಗವನ್ನು ಅನ್ಯಾಯಯುತವಾಗಿ ಆಕ್ರಮಿಸಿಕೊಂಡು ಒಲಿಂಪಿಕ್ ನಲ್ಲಿ ಸ್ಪರ್ಧಿಸುವ ಮೂಲಕ ಮೋಸ ಮಾಡಿದ್ದಾರೆ ಎಂದು ಆಪಾದಿಸಿದ್ದರು. ಟ್ರಯಲ್ಸ್‌ನಲ್ಲಿ ತನ್ನನ್ನು ಸೋಲಿಸಿದ ಮಹಿಳಾ ಕುಸ್ತಿಪಟುವ ಜಾಗವನ್ನು ಆಕ್ರಮಿಸಿಕೊಂಡು ವಿನೇಶ್ ಒಲಿಂಪಿಕ್‌ಗೆ ತೆರಳಿದ್ದರು. ಹೀಗಾಗಿ ಆಕೆಗಾದ ಸೋಲು ಸಮರ್ಥನೀಯವಾದುದು ಹಾಗೂ ಅದಕ್ಕೆ ಆಕೆ ಯೋಗ್ಯಳಾಗಿದ್ದಾಳೆ’’ ಎಂದು ಹೇಳಿದ್ದರು. ಹಲವಾರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಬ್ರಿಜ್‌ಭೂಷಣ್ ಶರಣ್ ಸಿಂಗ್ ಎದುರಿಸುತ್ತಿದ್ದಾರೆ.