ಆದರೆ ಎಂ.ಎಸ್.ಸ್ವಾಮಿನಾಥನ್ ಅವರ ಎಂಎಸ್ಪಿ ಸೂತ್ರದ ಬಗ್ಗೆ ಮೋದಿ ಸರಕಾರ ಮೌನವಾಗಿದೆ

Update: 2024-02-09 15:16 GMT

ಎಂ.ಎಸ್.ಸ್ವಾಮಿನಾಥನ್ ,ಜೈರಾಂ ರಮೇಶ್ |Photo: hindustantimes.com

ಹೊಸದಿಲ್ಲಿ : ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರಿಗೆ ಮೋದಿ ಸರಕಾರವು ಭಾರತ ರತ್ನ ಪ್ರಶಸ್ತಿಯನ್ನು ಪ್ರಕಟಿಸಿದೆ. ಆದರೆ ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಕುರಿತು ಸ್ವಾಮಿನಾಥನ್ ಸೂತ್ರವನ್ನು ಜಾರಿಗೊಳಿಸುವ ಬಗ್ಗೆ ಅದು ಮೌನವಾಗಿದೆ ಎಂದು ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಕುಟುಕಿದ್ದಾರೆ. 

ಮೋದಿ ಸರಕಾರದ ಹಟಮಾರಿತನದಿಂದಾಗಿ 700 ರೈತರು ತಮ್ಮ ಆಂದೋಲನದ ಸಂದರ್ಭದಲ್ಲಿ ಹುತಾತ್ಮರಾದರು. ಆದರೆ ಸರಕಾರವು ಅವರನ್ನು ವಂಚಿಸಿದೆ. ದಿಲ್ಲಿಗೆ ಜಾಥಾ ತೆರಳಲು ಇಂದಿಗೂ ರೈತರು ಸಿದ್ಧರಿದ್ದಾರೆ. ಆದರೆ ಅವರ ಗೋಳನ್ನು ಸರಕಾರವು ಕೇಳುತ್ತಿಲ್ಲ ಎಂದು ರಮೇಶ್ ಶುಕ್ರವಾರ ಪಿವಿಎನ್, ಚೌಧರಿ ಚರಣ್ ಸಿಂಗ್ ಮತ್ತು ಎಂ.ಎಸ್.ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆಯ ಬಳಿಕ ಎಕ್ಸ್ ಪೋಸ್ಟ್ ನಲ್ಲಿ ಬರೆದಿದ್ದಾರೆ.

ರೈತರಿಗೆ ನ್ಯಾಯವನ್ನು ಒದಗಿಸುವುದು ಚರಣ್ ಸಿಂಗ್ ಮತ್ತು ಸ್ವಾಮಿನಾಥನ್ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಹೇಳಿರುವ ರಮೇಶ್,‘‘ರೈತರಿಗೆ ನ್ಯಾಯವನ್ನು ಒದಗಿಸುವುದು ಕಾಂಗ್ರೆಸ್ ನ ಭಾರತ ಜೋಡೊ ನ್ಯಾಯ ಯಾತ್ರೆಯ ಪ್ರಮುಖ ಗುರಿಗಳಲ್ಲೊಂದಾಗಿದೆ. ಸ್ವಾಮಿನಾಥನ್ ಸೂತ್ರದ ಆಧಾರದಲ್ಲಿ ರೈತರಿಗೆ ಎಂಎಸ್ಪಿಯ ಕಾನೂನಾತ್ಮಕ ಖಾತರಿಯನ್ನು ನೀಡಬೇಕು ಎನ್ನುವುದು ‘ಕಿಸಾನ್ ನ್ಯಾಯ’ಕ್ಕಾಗಿ ನಮ್ಮ ಬೇಡಿಕೆಯಾಗಿದೆ ’’ ಎಂದಿದ್ದಾರೆ.

ತನ್ನ ತಂದೆ ಜೀವಂತವಿದ್ದಾಗ ಈ ಸುದ್ದಿಯನ್ನು ಕೇಳಿದ್ದರೆ ಸಂತಸಪಡುತ್ತಿದ್ದರು ಎಂದು ಹೇಳಿದ ಸ್ವಾಮಿನಾಥನ್ ಪುತ್ರಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್,‘ನನ್ನ ತಂದೆ ಎಂದೂ ಪ್ರಶಸ್ತಿಗಳಿಗಾಗಿ ಕೆಲಸ ಮಾಡಿರಲಿಲ್ಲ. ಹಲವಾರು ಮನ್ನಣೆಗಳು ಅವರನ್ನು ಅರಸಿ ಬಂದಿದ್ದವು. ತಳಮಟ್ಟದಲ್ಲಿ ತನ್ನ ಕಾರ್ಯಗಳ ಫಲಿತಾಂಶಗಳು ಹಾಗೂ ಜನರ ಪ್ರೀತಿ ಮತ್ತು ವಾತ್ಸಲ್ಯದಿಂದ ಅವರು ಹೆಚ್ಚು ಪ್ರೇರೇಪಿಸಲ್ಪಟ್ಟಿದ್ದರು ’ಎಂದು ಹೇಳಿದರು.

ಸ್ವಾಮಿನಾಥನ್ 2023, ಸೆ.28ರಂದು ನಿಧನರಾದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News