ತಮಿಳುನಾಡಿನಲ್ಲಿ ಸಿಎಎ ಜಾರಿ ಇಲ್ಲ: ಸ್ಟಾಲಿನ್
ಚೆನ್ನೈ.ಮಾ.13: ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನ ವಿರೋಧಿಯೆಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಂಗಳವಾರ ಬಣ್ಣಿಸಿದ್ದಾರೆ. ಕೇಂದ್ರ ಸರಕಾರದ ಈ ವಿವಾದಾತ್ಮಕ ಮಸೂದೆಯನ್ನು ತಮಿಳುನಾಡು ಸರಕಾರವು ಜಾರಿಗೊಳಿಸುವು ದಿಲ್ಲವೆಂದು ಅವರು ಘೋಷಿಸಿದ್ದಾರೆ.
‘‘ ಸಿಎಎ ಸಂಪೂರ್ಣವಾಗಿ ಅನಗತ್ಯವಾದುದಾಗಿದೆ ಹಾಗೂ ಅದನ್ನು ಹಿಂತೆಗೆದುಕೊಳ್ಳಬೇಕಾಗಿದೆ. ಭಾರತದ ಏಕತೆಯ ಮೇಲೆ ಪರಿಣಾಮ ಬೀರುವಂತಹ ಯಾವುದೇ ಕಾನೂನಿಗೂ ರಾಜ್ಯ ಸರಕಾರವು ಆಸ್ಪದ ನೀಡುವುದಿಲ್ಲ’’ ಎಂದು ಸ್ಟಾಲಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘‘ ಸಮಾಜದ ಎಲ್ಲಾ ಸ್ತರಗಳ ಜನರ ವಿರೋಧದ ಹೊರತಾಗಿಯೂ ಕೇಂದ್ರ ಸರಕಾರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ ತರಾತುರಿಯಿಂದ ಸಿಎಎ ಅಧಿಸೂಚನೆಯನ್ನು ಜಾರಿಗೊಳಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನದ ಮೂಲಭೂತ ತತ್ವಗಳಿಗೆ, ದೇಶದ ಬಹುತ್ವವಾದಿ, ಜಾತ್ಯತೀತ ಸ್ವರೂಪಕ್ಕೆ ಮತ್ತು ಭಾಷಾ, ಜನಾಂಗೀಯ ಹಾಗೂ ಧಾರ್ಮಿಕ ಭಿನ್ನತೆಗಳ ಹೊರತಾಗಿಯೂ ಸೌಹಾರ್ದದಿಂದ ಬದುಕುತ್ತಿರುವ ಜನರ ಒಳಿತಿಗೆ ವಿರುದ್ಧವಾದುದಾಗಿದೆ ’’ ಎಂದು ಸ್ಟಾಲಿನ್ ಹೇಳಿದ್ದಾರೆ.
ಈ ನಡುವೆ ಸ್ಟಾಲಿನ್ ಹೇಳಿಕೆಯನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ತೀವ್ರವಾಗಿ ವಿರೋಧಿಸಿದ್ದಾರೆ. ಸಿಎಎ ಜಾರಿಗೊಳಿಸುವುದಿಲ್ಲವೆಂದು ಹೇಳಲು ಮುಖ್ಯಮಂತ್ರಿ ಸ್ಟಾಲಿನ್‌ಗೆ ಈ ನೆಲದ ಕಾನೂನಿನಡಿ ಯಾವುದೇ ಅಧಿಕಾರವಿಲ್ಲವೆಂದು ಅವರು ಹೇಳಿದ್ದಾರೆ.