ನಕಲಿ ದಾಖಲೆ ಬಳಸಿ ಸಿಎಪಿಎಫ್ ನೇಮಕಾತಿ ; ಪಶ್ಚಿಮಬಂಗಾಳದ 8 ಸ್ಥಳಗಳಲ್ಲಿ ಸಿಬಿಐ ದಾಳಿ

Update: 2024-02-03 15:20 GMT

ಕೋಲ್ಕತ್ತಾ: ಕೇಂದ್ರ ಶಸಸ್ತ್ರ ಪಡೆಗಳ ನೇಮಕಾತಿಯಲ್ಲಿ ಗಡಿ ಪ್ರದೇಶದ ನಿವಾಸಿಗಳಿಗೆ ಲಭ್ಯವಿರುವ ಸೌಲಭ್ಯಗಳನ್ನು ಪಡೆದುಕೊಳ್ಳಲು ನಕಲಿ ವಾಸ್ತವ್ಯ ದಾಖಲೆಗಳನ್ನು ಬಳಸಲಾಗಿದೆ ಎಂಬ ಆರೋಪದ ಕುರಿತಂತೆ ಸಿಬಿಐ ಶನಿವಾರ ಕೋಲ್ಕತ್ತಾ ಹಾಗೂ ಪಶ್ಚಿಮಬಂಗಾಳದ 24 ಉತ್ತರ ಪರಗಣ ಜಿಲ್ಲೆಯ 8 ಸ್ಥಳಗಳಲ್ಲಿ ದಾಳಿ ನಡೆಸಿದೆ

ಗಡಿ ಪ್ರದೇಶದವರು ಎಂದು ಪ್ರತಿಪಾದಿಸುವ ನಕಲಿ ವಾಸ್ತವ್ಯ ಪ್ರಮಾಣ ಪತ್ರವನ್ನು ಬಳಸಿ ಶಸಸ್ತ್ರ ಪಡೆಗಳು ಹಾಗೂ ಸಿಎಪಿಎಫ್ ಗಳಿಗೆ ಹಲವು ಅಭ್ಯರ್ಥಿಗಳನ್ನು ಕಾನೂನುಬಾಹಿರವಾಗಿ ನೇಮಕ ಮಾಡಲಾಗಿದೆ ಎಂಬ ಆರೋಪಗಳನ್ನು ಪರಿಶೀಲಿಸುವಂತೆ ಕೋಲ್ಕತ್ತಾ ಉಚ್ಚ ನ್ಯಾಯಾಲಯ ನಿರ್ದೇಶನ ನೀಡಿದ ಬಳಿಕ ಸಿಬಿಐ ಕಳೆದ ಆಗಸ್ಟ್ ನಲ್ಲಿ ತನಿಖೆ ಆರಂಭಿಸಿತ್ತು.

ಕೆಲವು ಪಾಕಿಸ್ತಾನಿ ಪ್ರಜೆಗಳು ಕೂಡ ಈ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ. ನಕಲಿ ವಾಸ್ತವ್ಯ ಪ್ರಮಾಣ ಪತ್ರ ಸೃಷ್ಟಿಸುವಲ್ಲಿ ಭಾಗಿಯಾಗಿರುವ ಆರೋಪಕ್ಕೆ ಒಳಗಾದ ವಂಚಕರಿಗೆ ಸೇರಿದ ಸ್ಥಳಗಳಲ್ಲಿ ಕೂಡ ಸಿಬಿಐ ಶನಿವಾರ ದಾಳಿ ನಡೆಸಿದೆ.

ಸಿಬಿಐಯ ಪ್ರಾಥಮಿಕ ವಿಚಾರಣೆ ವರದಿ ಪರಿಶೀಲಿಸಿದ ನ್ಯಾಯಮೂರ್ತಿ ಜಯ್ ಸೇನ್ ಗುಪ್ತಾ ಶಸಸ್ತ್ರ ಪಡೆಗಳ ನೇಮಕಾತಿಯಲ್ಲಿ ಯಾವುದೇ ಭ್ರಷ್ಟಾಚಾರ ಕಂಡು ಬಂದಿಲ್ಲ. ಆದರೆ, ಕೇಂದ್ರ ಅರೆ ಸೇನಾ ಪಡೆಯಲ್ಲಿ ನಾಲ್ಕು ನಿದರ್ಶನಗಳು ಕಂಡು ಬಂದಿವೆ ಎಂದು ಹೇಳಿದ್ದರು.

ಪಶ್ಚಿಮಬಂಗಾಳ ಗಡಿ ರಾಜ್ಯವಾಗಿರುವುದರಿಂದ ಅಲ್ಲಿನ ಅಭ್ಯರ್ಥಿಗಳಿಗೆ ಕೇಂದ್ರ ಅರೆ ಸೇನಾ ಪಡೆ ಉದ್ಯೋಗಕ್ಕಾಗಿ ನಡೆಸುವ ಪರೀಕ್ಷೆಗಳಲ್ಲಿ ಕಡಿಮೆ ಕಟ್ ಆಫ್ ಅಂಕಗಳಿಗೆ ಅವಕಾಶ ನೀಡುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News