ಬಿಜೆಪಿ ನಾಯಕ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು
ಚೆನ್ನೈ: ಧರ್ಮಪುರಿಗೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭ ಧಾರ್ಮಿಕ ದ್ವೇಷ ಪ್ರಚೋದಿಸಿದ ಆರೋಪದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ವಿರುದ್ಧ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
‘ಎನ್ ಮಣ್, ಎನ್ ಮಕ್ಕಳ್’ ಪಾದಯಾತ್ರೆಯ ಭಾಗವಾಗಿ ಜನವರಿ 7 ಹಾಗೂ 8ರಂದು ಧರ್ಮಪುರಿ ಪ್ರವಾಸದ ಸಂದರ್ಭ ಅಣ್ಣಾಮಲೈ ಅವರು ಪಾಪಿರೆಡ್ಡಿಪಟ್ಟಿ ಸಮೀಪದ ಬೊಮ್ಮಿಡಿಯಲ್ಲಿರುವ ಸಂತ ಲೂರ್ಡ್ಸ್ ಚರ್ಚ್ ಗೆ ಭೇಟಿ ನೀಡುವುದನ್ನು ಹಾಗೂ ಇಲ್ಲಿನ ಮೇರಿಯ ಪ್ರತಿಮೆಗೆ ಹೂಹಾರ ಹಾಕುವ ಪ್ರಯತ್ನವನ್ನು ವಿರೋಧಿಸಿ ಯುವಕರ ಗುಂಪೊಂದು ಪ್ರತಿಭಟನೆ ನಡೆಸಿತ್ತು.
ಈ ಸಂದರ್ಭ ಪ್ರತಿಭಟನಕಾರರು ಹಾಗೂ ಅಣ್ಣಾಮಲೈ ಅವರ ನಡುವೆ ವಾಗ್ವಾದ ನಡೆದಿತ್ತು. ತಾಳ್ಮೆ ಕಳೆದುಕೊಂಡ ಅಣ್ಣಾಮಲೈ ಅವರು, ‘‘ಇಲ್ಲಿಗೆ ಆಗಮಿಸಲು ಪ್ರತಿಯೊಬ್ಬನಿಗೂ ಹಕ್ಕಿದೆ. ನನ್ನನ್ನು ತಡೆಯಲು ನಿಮಗೆ ಯಾವ ಹಕ್ಕಿದೆ? ಚರ್ಚ್ ನಿಮ್ಮ ಹೆಸರಿನಲ್ಲಿದೆಯೇ? ನಾನು ಇಲ್ಲಿಗೆ 10 ಸಾವಿರ ಜನರನ್ನು ತಂದರೆ, ನೀವೇನು ಮಾಡುತ್ತೀರಿ?’’ ಎಂದು ಪ್ರಶ್ನಿಸಿದ್ದರು.
ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಕಾರರನ್ನು ಚದುರಿಸಿದ ಬಳಿಕ ಅಣ್ಣಾಮಲೈ ಅವರು ಮೇರಿಯ ಮೂರ್ತಿಗೆ ಹೂಹಾರ ಹಾಕಿದ್ದರು. ಪಿ. ಪಲ್ಲಿಪಟ್ಟಿಯ ಯುವಕರು ಸಲ್ಲಿಸಿದ ದೂರಿನ ಆಧಾರದಲ್ಲಿ ಬೊಮ್ಮಿಡಿ ಪೊಲೀಸರು ಅಣ್ಣಾಮಲೈ ವಿರುದ್ಧ ಧಾರ್ಮಿಕ ದ್ವೇಷ ಪ್ರಚೋದನೆ ಹಾಗೂ ಸಾರ್ವಜನಿಕ ಶಾಂತಿಗೆ ಧಕ್ಕೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಿದ್ದರು