ಕಾವೇರಿ ವಿವಾದ: ತನಗೆ ಸಲ್ಲಬೇಕಾದ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೆ ನಿರ್ದೇಶಿಸುವಂತೆ ಸುಪ್ರೀಂಗೆ ತಮಿಳುನಾಡು ಸರಕಾರ ಮನವಿ
ಹೊಸದಿಲ್ಲಿ: ತನಗೆ ಸಲ್ಲಬೇಕಾಗಿರುವ ನೀರನ್ನು ಬಿಡುಗಡೆ ಮಾಡಲು ಕರ್ನಾಟಕಕ್ಕೆ ನಿರ್ದೇಶಿಸುವಂತೆ ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್ ಅನ್ನು ಆಗ್ರಹಿಸಿದೆ. ಈ ಸಂದರ್ಭ ಸುಪ್ರೀಂ ಕೋರ್ಟ್ 2023 ಆಗಸ್ಟ್ 14ರಿಂದ ಅನ್ವಯವಾಗುವಂತೆ ಕರ್ನಾಟಕದ ಜಲಾಶಯದಿಂದ 24,000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲು ಅದಕ್ಕೆ ನಿರ್ದೇಶಿಸುವಂತೆ ಕೋರಿದ ಮನವಿಯನ್ನು ಸೋಮವಾರ ಆಲಿಕೆ ವೇಳೆ ಪ್ರಸ್ತಾವಿಸುವಂತೆ ತಮಿಳುನಾಡು ಸರಕಾರಕ್ಕೆ ಸೂಚಿಸಿತು. ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು ಈ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಪೀಠದ ಮುಂದೆ ಈ ಶುಕ್ರವಾರ ಪ್ರಸ್ತಾಪಿಸಿದರು.
ಕಾವೇರಿ ಜಲ ವಿವಾದದಲ್ಲಿ ಈ ಮನವಿಯನ್ನು ಪಟ್ಟಿ ಮಾಡುವಂತೆ ಸುಪ್ರೀಂ ಕೋರ್ಟ್ ಅನ್ನು ಆಗ್ರಹಿಸಿದ ರೋಹ್ಟಗಿ, ತಪ್ಪಲು ಜಿಲ್ಲೆಗಳಲ್ಲಿ ಬೆಳೆದು ನಿಂತ ಬೆಳೆಗಳಿಗೆ ತುರ್ತಾಗಿ ನೀರಿನ ಅಗತ್ಯತೆ ಇದೆ ಎಂದು ಹೇಳಿದರು. ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಕರ್ನಾಟಕ ಕೆಆರ್ಎಸ್ ಹಾಗೂ ಕಬಿನಿ ಜಲಾಶಯದಿಂದ ಬಿಲ್ಲಿಗುಂಡುಲುವಿನಲ್ಲಿ 2023 ಆಗಸ್ಟ್ 11ರಂದು ಮುಂದಿನ 15 ದಿನಗಳಲ್ಲಿ ಬಿಡುಗಡೆ ಮಾಡಬೇಕಾಗಿದ್ದ ನೀರಿನ ಪ್ರಮಾಣವನ್ನು 15 ಸಾವಿರ ಕ್ಯೂಸೆಕ್ಸ್ (ಪ್ರತಿದಿನ 0.864 ಟಿಎಂಸಿ)ನಿಂದ 10 ಸಾವಿರ ಕ್ಯೂಸೆಕ್ಸ್ ಗೆ ಇಳಿಕೆ ಮಾಡಿದೆ. ಆ ಮೂಲಕ ಅದು ಆದೇಶವನ್ನು ಉಲ್ಲಂಘಿಸಿದೆ ಎಂದು ಮನವಿಯಲ್ಲಿ ಪ್ರತಿಪಾದಿಸಲಾಗಿದೆ.