ದಿಲ್ಲಿಯ ಎಲ್ಲಾ ಕೊಳಗೇರಿಗಳನ್ನು ನಾಶ ಮಾಡಲು ಕೇಂದ್ರ ಬಯಸಿದೆ: ಆಪ್
ಹೊಸದಿಲ್ಲಿ: ದಿಲ್ಲಿಯಲ್ಲಿರುವ ಎಲ್ಲಾ ಕೊಳಗೇರಿಗಳನ್ನು ನಾಶ ಮಾಡಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಬಯಸಿದೆ ಎಂದು ಆಮ್ ಆದ್ಮಿ ಪಕ್ಷ ಶುಕ್ರವಾರ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಿಲ್ಲಿ ಸಚಿವರಾದ ಅತಿಶಿ ಹಾಗೂ ಸೌರಭ್ ಭಾರದ್ವಾಜ್, ದಿಲ್ಲಿಯ ಕೊಳಗೇರಿಗಳ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸದೆ ಅವುಗಳನ್ನು ನಾಶಪಡಿಸಲಾಗುತ್ತಿದೆ ಎಂದು ಹೇಳಿದರು.
ನಗರದಲ್ಲಿರುವ ಎಲ್ಲಾ ಕೊಳಗೇರಿಗಳನ್ನು ನಾಶ ಮಾಡುವಂತೆ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ದಿಲ್ಲಿ ಮುನ್ಸಿಪಲ್ ಕಾರ್ಪೊರೇಶನ್ ನಂತಹ ಭೂ ಸ್ವಾಮಿತ್ವ ಹೊಂದಿರುವ ಸಂಸ್ಥೆಗಳಿಗೆ ಜನವರಿ 9ರಂದು ನಡೆದ ಸಭೆಯಲ್ಲಿ ಕೇಂದ್ರ ಸರಕಾರ ನಿರ್ದೇಶಿಸಿದೆ ಎಂದು ಅತಿಶಿ ಆರೋಪಿಸಿದ್ದಾರೆ.
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ 1,000 ದಿಂದ 1,500 ನಿವಾಸಿಗಳಿರುವ ಸುಂದರ್ ನರ್ಸರಿ ಹಾಗೂ ದಿಲ್ಲಿ ಪಬ್ಲಿಕ್ ಶಾಲೆಯ ನಡುವೆ ಇರುವ ಕೊಳಗೇರಿಗಳನ್ನು ನವೆಂಬರ್ನಲ್ಲಿ ನೆಲಸಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸರಕಾರದಿಂದ ಸ್ಥಳಾಂತರದ ಯಾವುದೇ ಪ್ರಸ್ತಾವ ಇಲ್ಲದೆ ಎರಡು ದಿನಗಳಲ್ಲಿ ಮನೆ ತ್ಯಜಿಸುವಂತೆ ಸೂಚಿಸಲಾಗಿದೆ ಎಂದು ಈ ಕೊಳಗೇರಿಗಳ ನಿವಾಸಿಗಳು ಆರೋಪಿಸಿದ್ದಾರೆ.