16ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಡಾ.ಅರವಿಂದ್ ಪನಗಾರಿಯಾ ನೇಮಕ
ಹೊಸದಿಲ್ಲಿ: ಕೇಂದ್ರ ಸರಕಾರವು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಡಾ.ಅರವಿಂದ್ ಪನಗಾರಿಯಾ ಅವರನ್ನು 16ನೇ ಹಣಕಾಸು ಆಯೋಗದ ಅಧ್ಯಕ್ಷರನ್ನಾಗಿ ನೇಮಕಗೊಳಿಸಿ ರವಿವಾರ ಆದೇಶವನ್ನು ಹೊರಡಿಸಿದೆ. ಪನಗಾರಿಯಾ ಅಮೆರಿಕದ ಕೊಲಂಬಿಯಾ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಆರ್ಥಿಕ ವ್ಯವಹಾರಗಳ ಇಲಾಖೆಯು ಹೊರಡಿಸಿರುವ ಅಧಿಸೂಚನೆಯಂತೆ ಐಎಎಸ್ ಅಧಿಕಾರಿ ರಿತ್ವಿಕ್ ರಂಜನಂ ಪಾಂಡೆ ಅವರು ಹಣಕಾಸು ಆಯೋಗದ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಆಯೋಗದ ಅಧ್ಯಕ್ಷರು ಮತ್ತು ಇತರ ಸದಸ್ಯರು ಹುದ್ದೆಯನ್ನು ವಹಿಸಿಕೊಂಡ ದಿನಾಂಕದಿಂದ ವರದಿ ಸಲ್ಲಿಕೆಯ ದಿನಾಂಕ ಅಥವಾ 2025,ಅ.31;ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಅಧಿಕಾರದಲ್ಲಿರುತ್ತಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಹಣಕಾಸು ಆಯೋಗವು ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಹಂಚಿಕೆ,ಭಾರತದ ಸಂಚಿತ ನಿಧಿಯಿಂದ ರಾಜ್ಯಗಳಿಗೆ ಆದಾಯ ಅನುದಾನವನ್ನು ನಿಯಂತ್ರಿಸುವ ನೀತಿಗಳು,ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳ ಆಧಾರದಲ್ಲಿ ಪಂಚಾಯತ್‌ಗಳು ಮತ್ತು ನಗರಸಭೆಗಳ ಸಂಪನ್ಮೂಲಗಳನ್ನು ಹೆಚ್ಚಿಸಲು ರಾಜ್ಯದ ಸಂಚಿತ ನಿಧಿಯನ್ನು ಹೆಚ್ಚಿಸಲು ಅಗತ್ಯ ಕ್ರಮಗಳ ಬಗ್ಗೆ ಶಿಫಾರಸುಗಳನ್ನು ಮಾಡುತ್ತದೆ.
ಆಯೋಗವು ವಿಪತ್ತು ನಿರ್ವಹಣಾ ಕ್ರಮಗಳಿಗೆ ಹಣಕಾಸು ಒದಗಿಸುವ ಪ್ರಸ್ತುತ ವ್ಯವಸ್ಥೆಗಳನ್ನು ಪುನರ್‌ಪರಿಶೀಲಿಸಬಹುದು ಮತ್ತು ಸೂಕ್ತ ಶಿಫಾರಸುಗಳನ್ನು ಮಾಡಬಹುದು ಎಂದೂ ಅಧಿಸೂಚನೆಯಲ್ಲಿ ಹೇಳಲಾಗಿದೆ.
ಆಯೋಗವು 2026,ಎ.1ರಿಂದ ಆರಂಭಗೊಳ್ಳುವ ಐದು ವರ್ಷಗಳ ಅವಧಿಗಾಗಿ ತನ್ನ ವರದಿಯನ್ನು 2025,ಅ.31ರೊಳಗೆ ಸಲ್ಲಿಸಬೇಕಿದೆ.