ಕೇಂದ್ರ ಸರಕಾರವು ವಕ್ಫ್ ತಿದ್ದುಪಡಿ ಮಸೂದೆ ಹೆಸರಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ: ಮಮತಾ ಬ್ಯಾನರ್ಜಿ
ಕೋಲ್ಕತಾ : ವಕ್ಫ್ ತಿದ್ದುಪಡಿ ಮಸೂದೆ ಹೆಸರಲ್ಲಿ ಕೇಂದ್ರ ಸರಕಾರ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ ಎಂದು ಸೋಮವಾರ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಂಸತ್ತಿನಲ್ಲಿ ಮಸೂದೆ ಅಂಗೀಕಾರಗೊಳ್ಳುವ ಕುರಿತು ಸಂಶಯ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸುವ ನಿರ್ಣಯದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಮತಾ ಬ್ಯಾನರ್ಜಿ, ಈ ವಿಷಯದಲ್ಲಿ ಕೇಂದ್ರ ಸರಕಾರವು ರಾಜ್ಯ ಸರಕಾರಗಳ ವ್ಯಾಪ್ತಿಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದರು.
ಮಸೂದೆ ಕುರಿತು ನಡೆದ ಜಂಟಿ ಸದನ ಸಮಿತಿ ಸಭೆಗಳಲ್ಲಿ ವಿರೋಧ ಪಕ್ಷಗಳನ್ನು ಬಿಜೆಪಿ ಮೌನಗೊಳಿಸಿದೆ ಎಂದು ಅವರು ಟೀಕಿಸಿದರು.
“ಜಂಟಿ ಸದನ ಸಮಿತಿ ಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಿಲ್ಲ. ಹೀಗಾಗಿಯೇ ಅವರು ಅದನ್ನು ಬಹಿಷ್ಕರಿಸಿದರು” ಎಂದೂ ಅವರು ಹೇಳಿದರು.
ಬಿಜೆಪಿ ಮುಸ್ಲಿಮರನ್ನು ಏಕಾಂಗಿಯಾಗಿಸುವ ವಿಭಜನಕಾರಿ ಕಾರ್ಯಸೂಚಿಯನ್ನು ಜಾರಿಗೆ ತರುತ್ತಿದೆ ಎಂದು ಅವರು ದೂರಿದರು.
ಸಂಸತ್ತಿನಲ್ಲಿ ಬಿಜೆಪಿಗೆ ಮೂರನೆ ಎರಡರಷ್ಟು ಬಹುಮತ ಇಲ್ಲದೆ ಇರುವುದರಿಂದ, ಅದು ಈ ಮಸೂದೆಯನ್ನು ಅಂಗೀಕರಿಸಲು ಸಾಧ್ಯವಾಗುವುದೇ ಎಂದು ಅವರು ಸಂಶಯ ವ್ಯಕ್ತಪಡಿಸಿದರು.