ಕೇರಳದಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ | ಕೆಲವು ಜಿಲ್ಲೆಗಳಲ್ಲಿ ಮೇ 19, 20ರಂದು ರೆಡ್ ಅಲರ್ಟ್ ಘೋಷಿಸಿದ ಐಎಂಡಿ
ತಿರುವನಂತಪುರ: ಕೇರಳದಲ್ಲಿ ಮುಂದಿನ ದಿನಗಳಲ್ಲಿ ತೀವ್ರತೆಯಿಂದ ಕೂಡಿದ ಭಾರೀ ಮಳೆ ಸುರಿಯಲಿದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಮುನ್ಸೂಚನೆ ನೀಡಿದೆ.
ಅಲ್ಲದೆ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮೇ 19 ಹಾಗೂ 20ರಂದು ರೆಡ್ ಅಲರ್ಟ್ ಘೋಷಿಸಿದೆ. ರಾಜ್ಯದ ಪತ್ತನಂತಿಟ್ಟ, ಕೊಟ್ಟಾಯಂ ಹಾಗೂ ಇಡುಕ್ಕಿ ಜಿಲ್ಲೆಗಳಲ್ಲಿ ಮೇ 19 ಹಾಗೂ 20ರಂದು ಭಾರತ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಹೆಚ್ಚುವರಿಯಾಗಿ ತಿರುವನಂತಪುರ, ಕೊಲ್ಲಂ, ಆಲಪ್ಪುಳ ಹಾಗೂ ಎರ್ನಾಕುಳಂನಲ್ಲಿ ಈ ಎರಡು ದಿನಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.
ಭಾರತ ಹವಾಮಾನ ಇಲಾಖೆ 9 ಜಿಲ್ಲೆಗಳಲ್ಲಿ ಮೇ 21ರಂದು ಆರೆಂಜ್ ಅಲರ್ಟ್ ಘೋಷಿಸಿದೆ. ಈ ಜಿಲ್ಲೆಗಳ ಪೈಕಿ ಕೆಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾದ ಜಿಲ್ಲೆಗಳಂತೆ ಮಳೆ ಸುರಿಯಲಿದೆ ಎಂದು ಅದು ತಿಳಿಸಿದೆ.
ಕೇರಳದ ಒಂದು ಅಥವಾ ಎರಡು ಸ್ಥಳಗಳಲ್ಲಿ ಮೇ 19 ಹಾಗೂ ಮೇ 22 ನಡುವೆ ಬಿರುಗಾಳಿ, ಗುಡುಗು, ಸಿಡಿಲಿನಿಂದ ಕೂಡಿದ ಮಳೆಯಾಗಲಿದೆ ಎಂದು ಕೂಡ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಹವಾಮಾನ ಇಲಾಖೆ ಶನಿವಾರ ಪತ್ತನಂತಿಟ್ಟ, ಇಡುಕ್ಕಿ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿತ್ತು.