ಚಂದ್ರಯಾನ-3; ಕಮರುತ್ತಿರುವ ಭರವಸೆ,ಇನ್ನೂ ನಿದ್ರೆಯಿಂದೇಳದ ವಿಕ್ರಮ್ ಮತ್ತು ಪ್ರಜ್ಞಾನ್

Update: 2023-09-26 16:30 GMT

Photo: X \ @isro

ಹೊಸದಿಲ್ಲಿ: ಇಸ್ರೋದ ಚಂದ್ರಯಾನ-3 ಮತ್ತೆ ಎಚ್ಚರಗೊಳ್ಳುತ್ತದೆ ಎಂಬ ಬಗ್ಗೆ ಹೆಚ್ಚಿನ ಭರವಸೆಯಿದ್ದಂತೆ ಕಂಡು ಬರುತ್ತಿಲ್ಲ. ಸೆ.22ರಂದೇ ಚಂದ್ರನಲ್ಲಿ ಸೂರ್ಯೋದಯವಾಗಿದ್ದು,ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಇರುವ ಸ್ಥಳದಲ್ಲಿ ಯಥೇಚ್ಛ ಬಿಸಿಲು ಬಿದ್ದಾಗ ಅವು ಎಚ್ಚರಗೊಳ್ಳುತ್ತವೆ ಎಂದು ಇಸ್ರೋ ಆಶಿಸಿತ್ತು. ಆದರೆ ಅದು ಸಂಭವಿಸಿಲ್ಲ ಮತ್ತು ಸಂಭವಿಸುವ ಸಾಧ್ಯತೆಯೂ ಪ್ರತಿ ಗಂಟೆ ಉರುಳಿದಂತೆ ಕ್ಷೀಣಿಸುತ್ತಿದೆ.

ಚಂದ್ರಯಾನ-3 ತನ್ನ ವೈಜ್ಞಾನಿಕ ಉದ್ದೇಶವನ್ನು ಸಾಧಿಸಿದ ಬಳಿಕ ಚಂದ್ರನಲ್ಲಿ ಸೂರ್ಯಾಸ್ತಕ್ಕೆ ಮುನ್ನ ಉಪಕರಣಗಳ ಎಲ್ಲ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವ ಮತ್ತು ಅವುಗಳನ್ನು ‘ನಿದ್ರಾ ಸ್ಥಿತಿ’ಯಲ್ಲಿರಿಸುವ ಮೂಲಕ ಅಭಿಯಾನದ ಜೀವಿತಾವಧಿಯನ್ನು ಹೆಚ್ಚಿಸಲು ಇಸ್ರೋ ಪ್ರಯತ್ನಿಸಿತ್ತು. ಚಂದ್ರನಲ್ಲಿಯ ಒಂದು ದಿನ ಅಥವಾ ಭೂಮಿಯ ಮೇಲಿನ 14 ದಿನಗಳ ಅವಧಿಗೆ ಕಾರ್ಯಾಚರಿಸುವಂತೆ ಚಂದ್ರಯಾನ-3ನ್ನು ವಿನ್ಯಾಸಗೊಳಿಸಲಾಗಿತ್ತು. ಲ್ಯಾಂಡರ್ ಮತ್ತು ರೋವರ್ ಬೀಡು ಬಿಟ್ಟಿರುವ ಚಂದ್ರನ ದಕ್ಷಿಣ ಧ್ರುವದ ಸಮೀಪ ಮತ್ತೆ ಸೂರ್ಯ ಉದಯಿಸಿದಾಗ ಸಾಕಷ್ಟು ಬಿಸಿಲನ್ನು ಹೀರಿಕೊಂಡ ಬಳಿಕ ಅವು ಮತ್ತೊಮ್ಮೆ ಎಚ್ಚೆತ್ತುಕೊಳ್ಳಬಹುದು ಎನ್ನುವುದು ಇಸ್ರೋದ ಲೆಕ್ಕಾಚಾರವಾಗಿತ್ತು.

ವಿಕ್ರಮ್ ಮತ್ತು ಪ್ರಜ್ಞಾನ್ಗಳಲ್ಲಿಯ ವಿದ್ಯುನ್ಮಾನ ಸಾಧನಗಳನ್ನು ಚಂದ್ರನ ಮೇಲಿನ ರಾತ್ರಿಯ ವಿಪರೀತ ಸ್ಥಿತಿಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿಲ್ಲ. ಚಂದ್ರನ ರಾತ್ರಿಯ ಸಮಯದಲ್ಲಿ ಸಂಪೂರ್ಣ ಕತ್ತಲೆಯಿರುತ್ತದೆ,ಇದರಿಂದಾಗಿ ಸೌರಚಾಲಿತ ಅಭಿಯಾನವು ವಿದ್ಯುತ್ತನ್ನು ಪಡೆಯುವುದಿಲ್ಲ. ಅಲ್ಲದೆ ತಾಪಮಾನವು ಮೈನಸ್ 200 ಡಿಗ್ರಿಗಳಿಗೂ ಕಡಿಮೆಯಿರುತ್ತದೆ,ಇದರಿಂದಾಗಿ ವಿದ್ಯುನ್ಮಾನ ಸಾಧನಗಳು ಘನೀಕರಿಸಲ್ಪಡುತ್ತವೆ ಮತ್ತು ನಾಶಗೊಳ್ಳಬಹುದು.

ಆದರೆ ಇಸ್ರೋ ವಿಜ್ಞಾನಿಗಳು ಅಂತರಿಕ್ಷ ನೌಕೆಯು ವಿಪರೀತ ಸ್ಥಿತಿಗಳಲ್ಲಿಯೂ ಬದುಕುಳಿಯಬಹುದು ಮತ್ತು ಚಂದ್ರನಲ್ಲಿ ಸೂರ್ಯ ಉದಯಿಸುವ ಸೆ.22ರಂದು ಲ್ಯಾಂಡರ್ ಮತ್ತು ರೋವರ್ ಮತ್ತೆ ಎಚ್ಚರಗೊಳ್ಳಬಹುದು ಎಂಬ ವಿಶ್ವಾಸವನ್ನು ಹೊಂದಿದ್ದರು. ಯಥೇಚ್ಛ ಬಿಸಿಲು ಅವು ತಮ್ಮ ಬ್ಯಾಟರಿಗಳನ್ನು ರೀಚಾರ್ಜ್ ಮಾಡಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ ಎಂದು ನಂಬಲಾಗಿತ್ತು.

ಅದೇನೇ ಇದ್ದರೂ ಚಂದ್ರಯಾನ-3ರ ಜೊತೆ ಸಂಪರ್ಕವನ್ನು ಸಾಧಿಸಲು ಇಸ್ರೋಕ್ಕೆ ಸಾಧ್ಯವಾಗುತ್ತಿಲ್ಲ ಮತ್ತು ಅದರ ಭರವಸೆಯು ಕಮರುತ್ತಿದೆ. ವಾಸ್ತವದಲ್ಲಿ ವಿದ್ಯುನ್ಮಾನ ಸಾಧನಗಳು ಘನೀಕರಿಸುವ ತಾಪಮಾನವನ್ನು ತಡೆದುಕೊಳ್ಳುವ ಸಾಧ್ಯತೆ 50:50ರಷ್ಟಿತ್ತು.

ತನ್ನ ಜೀವಿತಾವಧಿಯ ಬಳಿಕ ಎಚ್ಚರಗೊಂಡಿರದಿದ್ದರೂ ಚಂದ್ರಯಾನ-3 ಅಭಿಯಾನವು ಅದ್ಭುತ ಯಶಸ್ಸು ಆಗಿಯೇ ಉಳಿದುಕೊಳ್ಳಲಿದೆ. ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯ ಸಾಫ್ಟ್ ಲ್ಯಾಂಡಿಂಗ್ ನಡೆಸುವ ಭಾರತದ ಸಾಮರ್ಥ್ಯವನ್ನು ಸಾಬೀತುಗೊಳಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿತ್ತು ಮತ್ತು ಅದನ್ನು ಸಾಧಿಸುವ ಮೂಲಕ ಭಾರತವು ಈಗಾಗಲೇ ಆ ಸಾಧನೆ ಮಾಡಿರುವ ದೇಶಗಳ ಸಣ್ಣಗುಂಪಿಗೆ ಸೇರಿಕೊಂಡಿದೆ. ಅಮೆರಿಕ,ಹಿಂದಿನ ಸೋವಿಯತ್ ಒಕ್ಕೂಟ ಮತ್ತು ಚೀನಾ ಗುಂಪಿನಲ್ಲಿರುವ ಇತರ ದೇಶಗಳಾಗಿವೆ.

ಅಲ್ಲದೆ ಪ್ರಜ್ಞಾನ್ ಚಂದ್ರನ ಮೇಲೆ ಸುಮಾರು ನೂರು ಮೀಟರ್ಗಳಷ್ಟು ದೂರ ಸಂಚರಿಸಿದೆ ಮತ್ತು ಅಲ್ಲಿ ಹಲವಾರು ಮೂಲಧಾತುಗಳ ಅಸ್ತಿತ್ವವನ್ನು ಪತ್ತೆ ಹಚ್ಚಿದೆ. ಅತ್ಯಂತ ಗಮನಾರ್ಹವೆಂದರೆ ಅದು ಗಂಧಕದ ಉಪಸ್ಥಿತಿಯ ಪುರಾವೆಯನ್ನು ಸಂಗ್ರಹಿಸಿದ್ದು,ಹಿಂದಿನ ಯಾವುದೇ ಕಾರ್ಯಾಚರಣೆಯು ಇದನ್ನು ಸಾಧಿಸಿರಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News