ಅರುಣಾಚಲ ಪ್ರದೇಶ ಬಳಿ ಎಲ್ಎಸಿಯ ಸೂಕ್ಷ್ಮಪ್ರದೇಶಗಳಲ್ಲಿ ತಲೆಯೆತ್ತುತ್ತಿರುವ ಚೀನಿ ಗ್ರಾಮಗಳು; ವರದಿ

Update: 2023-08-28 12:58 GMT

Photo : NDTV

ಹೊಸದಿಲ್ಲಿ: ಭಾರತದೊಂದಿಗೆ ಗುರುತಿಸಿರದ ಗಡಿಗಳ ಮೇಲೆ ತನ್ನ ಹಕ್ಕುಗಳನ್ನು ಪ್ರತಿಪಾದಿಸುವ ಪ್ರಯತ್ನದಲ್ಲಿ ಚೀನಾ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ)ಯ ಅನೇಕ ಸೂಕ್ಷ್ಮಪ್ರದೇಶಗಳಲ್ಲಿ ‘ಗಡಿ ವಸಾಹತು ಗ್ರಾಮಗಳ’ ಸ್ಥಾಪನೆಯಲ್ಲಿ ನಿರತವಾಗಿದೆ ಎಂದು newindianexpress.com ವರದಿ ಮಾಡಿದೆ.

ಈ ವಸಾಹತುಗಳು ಪೂರ್ವ ಕ್ಷೇತ್ರದ ಮೇಲೆ ಕೇಂದ್ರೀಕೃತವಾಗಿವೆ ಎಂದು ಹಲವಾರು ಮೂಲಗಳು ದೃಢಪಡಿಸಿವೆ. ಟಿಬೆಟಿಯನ್ ಸ್ವಾಯತ್ತ ಪ್ರದೇಶದಲ್ಲಿ ಇಂತಹ 628 ಗ್ರಾಮಗಳನ್ನು ಅಂದಾಜಿಸಲಾಗಿದ್ದು, ತವಾಂಗ್ (30 ಗ್ರಾಮಗಳು) ಮತ್ತು ತುಲುಂಗ್ ಲಾ (25)ದತ್ತ ಗಮನ ಹರಿಸಲಾಗಿದೆ.

ವ್ಯೂಹಾತ್ಮಕ ದೃಷ್ಟಿಕೋನದಿಂದ ತವಾಂಗ್ ಅರುಣಾಚಲ ಪ್ರದೇಶ ಮತ್ತು ಈಶಾನ್ಯ ಭಾರತಕ್ಕೆ ಪ್ರವೇಶ ಕೇಂದ್ರವಾಗಿದೆ. ಅಲ್ಲದೆ ಟಿಬೆಟಿಯನ್ನರ ಪಾಲಿಗೆ ಧಾರ್ಮಿಕ ಮಹತ್ವವನ್ನೂ ಹೊಂದಿದೆ. 1975ರಲ್ಲಿ ಚೀನಿಯರು ಹೊಂಚುದಾಳಿಯಲ್ಲಿ ನಾಲ್ವರು ಅಸ್ಸಾಂ ರೈಫಲ್ಸ್ ಯೋಧರನ್ನು ಕೊಂದ ಬಳಿಕ ತುಲುಂಗ್ ಲಾ ಕೂಡ ಮಹತ್ವವನ್ನು ಪಡೆದುಕೊಂಡಿದೆ. ಚುಮಾರ್ನ ಸೂಕ್ಷ್ಮ ಪ್ರದೇಶದಲ್ಲಿಯೂ ಇಂತಹ ಎಂಟು ಗ್ರಾಮಗಳು ಕಂಡುಬಂದಿವೆ.

ಮೂಲಗಳು ತಿಳಿಸಿರುವಂತೆ ಪಶ್ಚಿಮ ಭೂತಾನ ಮತ್ತು ಉತ್ತರ ಭೂತಾನಿನ ಎದುರಿನ ಪ್ರದೇಶದಲ್ಲಿಯೂ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಆದರೆ, ಈ ಪ್ರದೇಶಗಳ ಮೇಲೆ ತನ್ನ ಹಕ್ಕುಗಳನ್ನು ಪ್ರತಿಪಾದಿಸಲು ಚೀನಾ ಈ ವಸಾಹತುಗಳನ್ನು ಬಳಸಿಕೊಳ್ಳುವುದರಿಂದ ಅವುಗಳನ್ನು ಗ್ರಾಮಗಳೆಂದು ಪರಿಗಣಿಸುವುದರ ವಿರುದ್ಧ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ‘ನಾವು ಇವುಗಳನ್ನು ಗುರುತಿಸಿರದ ಪ್ರದೇಶಗಳಲ್ಲಿ ಚೀನಿ ಗಡಿ ವಸಾಹತುಗಳು ಎಂದು ಕರೆಯಬೇಕೇ ಹೊರತು ಚೀನಿ ಗ್ರಾಮಗಳು ಎಂದಲ್ಲ. ನಾವು ಅವುಗಳನ್ನು ಈಗ ಚೀನಿ ಗ್ರಾಮಗಳು ಎಂದು ಕರೆದರೆ ಭಾರತೀಯ ಮಾಧ್ಯಮಗಳು ಸಹ ಈ ವಸಾಹತುಗಳನ್ನು ಚೀನಿ ಗ್ರಾಮಗಳು ಎಂದು ಬಣ್ಣಿಸಿವೆ ಎಂದು 10 ವರ್ಷಗಳ ಬಳಿಕ ಅವರು ಹೇಳುತ್ತಾರೆ ’ ಎಂದು ಅಧಿಕಾರಿಯೋರ್ವರು ಹೇಳಿದರು.

ಚೀನಾದ 2022ರ ಭೂ ಗಡಿ ಕಾನೂನು ಗಡಿಯುದ್ದಕ್ಕೂ ಜನರ ಪುನರ್ವಸತಿಗೆ ಮತ್ತು ನಿರ್ಣಾಯಕ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಕರೆ ನೀಡುತ್ತದೆ. ಈ ಗ್ರಾಮಗಳು ನಾಗರಿಕ ಮತ್ತು ಮಿಲಿಟರಿ ಮೂಲಸೌರ್ಯಗಳ ನಡುವಿನ ಅಂತರವನ್ನು ತುಂಬುತ್ತವೆ.

ಸಂಪರ್ಕ ಸುಧಾರಿಸಿದೆ, ಅವರು ತೈಲ ಕೊಳವೆ ಮಾರ್ಗ, ಆಪ್ಟಿಕಲ್ ಫೈಬರ್ ಮತ್ತು ಹೆಲಿಪೋರ್ಟ್ ಹೊಂದಿದ್ದಾರೆ ಎಂದು ತಿಳಿಸಿದ ಮೂಲಗಳು, ಈ ವಸಾಹತುಗಳಲ್ಲಿ ಬಲವಂತದಿಂದ ಜನರು ನೆಲೆಸುವಂತೆ ಮಾಡಲಾಗುತ್ತಿದೆ ಎಂದವು.

ಅರುಣಾಚಲ ಪ್ರದೇಶದ ಪೂರ್ವ ಭಾಗದಲ್ಲಿರುವ ಕಿಬಿತುಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಾತು ಕ್ಯಾಂಪ್ ಎಂದು ಕರೆಯಲಾಗುವ ಇಂತಹ ವಸಾಹತೊಂದನ್ನು ವರದಿಗಾರರು ವೀಕ್ಷಿಸಿದ್ದಾರೆ. ಅಲ್ಲಿ ಎರಡು ಪ್ರತ್ಯೇಕ ವಿಭಾಗಗಳನ್ನು ನಿರ್ಮಿಸಲಾಗಿದೆ.

ಅರ್ಧದಷ್ಟು ಗ್ರಾಮ ಪ್ರದೇಶವಾಗಿದ್ದರೆ, ಇನ್ನರ್ಧ ಆಡಳಿತಾತ್ಮಕ ಕಟ್ಟಡ,ಹೆಲಿಪ್ಯಾಡ್ ಮತ್ತು ಕಟ್ಟಡದ ಹಿಂದೆ ಚಿಕ್ಕ ಫೈರಿಂಗ್ ರೇಂಜ್ ಹೊಂದಿರುವ ಮಿಲಿಟರಿ ಬ್ಲಾಕ್ ಆಗಿದೆ.

ಭಾರತವೂ ಗಡಿಗಳಿಗೆ ಸಮೀಪ ಗ್ರಾಮಗಳನ್ನು ನಿರ್ಮಿಸಲು ಆರಂಭಿಸಿದೆ,ಆದರೆ ನಮ್ಮ ಪ್ರಾರಂಭ ತಡವಾಗಿದೆ ಎಂದು ಮೂಲಗಳು ತಿಳಿಸಿದವು.

ಚೀನಾದ 2022ರ ಭೂ ಗಡಿ ಕಾನೂನಿನ ಪ್ರಕಾರ ಈ ಗ್ರಾಮಗಳು ಕಾನೂನು ಆಧಾರವನ್ನು ಹೊಂದಿವೆ. ಪಿಎಲ್ಎ ಮತ್ತು ಚೈನೀಸ್ ಪೀಪಲ್ಸ್ ಆರ್ಮ್ಡ್ ಪೊಲೀಸ್ ಫೋರ್ಸ್ ಗಡಿಯುದ್ದಕ್ಕೂ ಭದ್ರತೆಯನ್ನು ಕಾಯ್ದುಕೊಳ್ಳುವ ಹೊಣೆಗಾರಿಕೆಯನ್ನು ಹೊಂದಿವೆ ಎಂದು ಈ ಕಾನೂನು ಹೇಳುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News