ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಚುರು ಸಂಸದ ರಾಹುಲ್ ಕಾಸ್ವಾನ್
ಹೊಸದಿಲ್ಲಿ: ರಾಜಸ್ಥಾನದ ಚುರು ಕ್ಷೇತ್ರದಿಂದ ಎರಡು ಸಲ ಆಯ್ಕೆಯಾಗಿರುವ ಸಂಸದ ರಾಹುಲ್ ಕಾಸ್ವಾನ್ ಅವರು ಸೋಮವಾರ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ. ಅವರು ಲೋಕಸಭಾ ಸದಸ್ಯತ್ವಕ್ಕೂ ರಾಜೀನಾಮೆಯನ್ನು ನೀಡಿದ್ದಾರೆ. ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆಗೆ ಕಾಸ್ವಾನ್ ಗೆ ಟಿಕೆಟ್ ನಿರಾಕರಿಸಿ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ದೇವೇಂದ್ರ ಝಝರಿಯಾ ಅವರನ್ನು ಚುರುದಲ್ಲಿ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು.
ದಿಲ್ಲಿಯ ಕಾಂಗ್ರೆಸ್ ಕಚೇರಿಯಲ್ಲಿ ಕಾಸ್ವಾನ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಅಧಿಕಾರದ ವಿರುದ್ಧ ಹೋರಾಡಿದ ಇಂತಹ ಜನರ ಅಗತ್ಯ ಪಕ್ಷಕ್ಕಿದೆ. ಊಳಿಗಮಾನ್ಯ ಮನಃಸ್ಥಿತಿಯ ಜನರ ವಿರುದ್ಧ ಮತ್ತು ರೈತರ ಪರ ಹೋರಾಡಿದ ಕಾಸ್ವಾನ್ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವುದು ತನಗೆ ಸಂತಸವನ್ನುಂಟು ಮಾಡಿದೆ ಎಂದು ಹೇಳಿದರು.
ಕಾಂಗ್ರೆಸ್ ಗೆ ಸೇರ್ಪಡೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಸ್ವಾನ್,‘ಬಿಜೆಪಿ ನಮ್ಮ ಮಾತನ್ನು ಆಲಿಸುತ್ತಿರಲಿಲ್ಲ. ನಾನು ಮತ್ತು ನನ್ನ ಇಡೀ ಕುಟುಂಬ ಪ್ರದೇಶದಲ್ಲಿ ಬಿಜೆಪಿಗಾಗಿ ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತಿದ್ದೆವು. ಆದರೆ ಬಿಜೆಪಿಯಲ್ಲಿ ನನ್ನ ಅಭಿಪ್ರಾಯಗಳಿಗೆ ಮನ್ನಣೆ ಇಲ್ಲ ಎಂದು ಅನಿಸಲು ಆರಂಭವಾಗಿತ್ತು. ನನ್ನ ರೈತ ಸೋದರರ ಪರವಾಗಿ ಧ್ವನಿಯೆತ್ತಲು ಸಾಧ್ಯವಾಗದಿದ್ದರೆ ನನಗೆ ಉಸಿರುಗಟ್ಟುತ್ತದೆ ಎಂದು ನನಗೆ ಅನಿಸಿತ್ತು ’ ಎಂದು ಹೇಳಿದರು.