ರಾಜಸ್ಥಾನ | ಚುನಾವಣಾಧಿಕಾರಿಗೆ ಕಪಾಳ ಮೋಕ್ಷ ಮಾಡಿದ ಸ್ವತಂತ್ರ ಅಭ್ಯರ್ಥಿಯ ಬಂಧನ
ಜೈಪುರ: ಬುಧವಾರ ರಾಜಸ್ಥಾನದ ದಿಯೋಲಿ-ಉನಿಯಾರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯ ಸಂದರ್ಭದಲ್ಲಿ ಚುನಾವಣಾಧಿಕಾರಿಯೊಬ್ಬರಿಗೆ ಕ್ಯಾಮೆರಾ ಎದುರೇ ಕಪಾಳ ಮೋಕ್ಷ ಮಾಡಿದ್ದ ಸ್ವತಂತ್ರ ಅಭ್ಯರ್ಥಿ ನರೇಶ್ ಮೀನಾರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಆದರೆ, ನಾನು ಶರಣಾಗುವುದಿಲ್ಲ ಎಂದು ನರೇಶ್ ಮೀನಾ ಪಟ್ಟು ಹಿಡಿದಿದ್ದರಿಂದ, ಸ್ಥಳದಲ್ಲಿ ಕೊಂಚ ಕಾಲ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ವರದಿಯಾಗಿದೆ.
ನರೇಶ್ ಮೀನಾರನ್ನು ಬಂಧಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ಒಳಗೊಂಡ ಬೃಹತ್ ಪೊಲೀಸ್ ತಂಡವು ವ್ಯೂಹಾತ್ಮಕ ಕಾರ್ಯಾಚರಣೆ ನಡೆಸಿತು. ಪೊಲೀಸರು ನರೇಶ್ ಮೀನಾರನ್ನು ವಶಕ್ಕೆ ಪಡೆಯುವುದಕ್ಕೂ ಮುನ್ನ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶರಣಾಗುವುದಿಲ್ಲ ಎಂದು ಘೋಷಿಸಿದರಲ್ಲದೆ, “ಪೊಲೀಸರನ್ನು ಸುತ್ತುವರೆಯಿರಿ.. ರಸ್ತೆ ಸಂಚಾರವನ್ನು ಅಸ್ತವ್ಯಸ್ತಗೊಳಿಸಿ” ಎಂದು ತಮ್ಮ ಬೆಂಬಲಿಗರಿಗೆ ಕರೆಯನ್ನೂ ನೀಡಿದರು.
ನರೇಶ್ ಮೀನಾರನ್ನು ಪೊಲೀಸರು ಬಂಧಿಸುತ್ತಿದ್ದಂತೆಯೆ, ಅವರ ಬೆಂಬಲಿಗರು ಹಿಂಸಾತ್ಮಕ ಪ್ರತಿಭಟನೆಗಿಳಿದರು. ಕಪಾಳಮೋಕ್ಷ ಘಟನೆ ನಡೆದಿದ್ದ ಸಾಮ್ರವಾಟ ಗ್ರಾಮದ ಹೊರಗಿನ ಹೆದ್ದಾರಿಯನ್ನು ಬಂದ್ ಮಾಡಲಾಯಿತು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಯಿತು. ಕೈಯಲ್ಲಿ ಲಾಠಿ ಹಿಡಿದು, ಸುರಕ್ಷತಾ ಜಾಕೆಟ್ ಗಳನ್ನು ತೊಟ್ಟು, ಗುರಾಣಿ ಹಿಡಿದುಕೊಂಡಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ನಡೆಸಿದ್ದು ಕಂಡು ಬಂದಿತು ಎಂದು ವರದಿಯಾಗಿದೆ.