ವಾಟ್ಸ್ ಆ್ಯಪ್ ನಿಷೇಧ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ದೇಶದ ಕಾನೂನು ಪ್ರಾಧಿಕಾರಗಳ ಆದೇಶಗಳನ್ನು ಉಲ್ಲಂಘಿಸುತ್ತಿರುವ ಆರೋಪ ಎದುರಿಸುತ್ತಿರುವ ವಾಟ್ಸ್ ಆ್ಯಪ್ ಕಾರ್ಯಾಚರಣೆಯನ್ನು ನಿಷೇಧಿಸುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಬೇಕು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ ಎಂದು livelaw.in ವರದಿ ಮಾಡಿದೆ.
ನಮ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅವಸರದ್ದು ಎಂಬ ಆಧಾರದಲ್ಲಿ ಹೈಕೋರ್ಟ್ ಅದನ್ನು ವಜಾಗೊಳಿಸಿದೆ ಎಂದು ಅರ್ಜಿದಾರರ ಪರ ಹಾಜರಿದ್ದ ವಕೀಲರು ನ್ಯಾ. ಎಂ.ಎಂ.ಸುಂದರೇಶ್ ಹಾಗೂ ಅರವಿಂದ್ ಕುಮಾರ್ ಅವರನ್ನೊಳಗೊಂಡ ಪೀಠದೆದುರು ವಾದ ಮಂಡಿಸಿದರು.
ಆದರೆ, ಯಾವುದೇ ವಿಚಾರಣೆ ನಡೆಸದ ನ್ಯಾಯಪೀಠ, ಆ ಅರ್ಜಿಯನ್ನು ವಜಾಗೊಳಿಸಿತು.
ಇದಕ್ಕೂ ಮುನ್ನ, ಮಾಹಿತಿ ತಂತ್ರಜ್ಞಾನ (ಮಧ್ಯಸ್ಥಿಕೆ ಮಾರ್ಗಸೂಚಿ ಹಾಗೂ ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021ರ ಅನುಸಾರವಾಗಿ ವಾಟ್ಸ್ ಆ್ಯಪ್ ಕಾರ್ಯನಿರ್ವಹಿಸುತ್ತಿಲ್ಲವಾದ್ದರಿಂದ, ಅದರ ವಿರುದ್ಧ ನಿಷೇಧ ಹೇರಬೇಕು ಎಂದು ಕೋರಿ ಅರ್ಜಿದಾರ ಓಮನಕುಟ್ಟನ್ ಕೆ.ಜಿ. ಮೊದಲಿಗೆ ಕೇರಳ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು.