ವೈದ್ಯರ ಅಚಾತುರ್ಯ: ಬಾಲಕನ ಎಡಗಣ್ಣಿನ ಬದಲು ಬಲಗಣ್ಣಿಗೆ ಶಸ್ತ್ರಚಿಕಿತ್ಸೆ!

Update: 2024-11-14 10:32 GMT

ಸಾಂದರ್ಭಿಕ ಚಿತ್ರ | PC ; freepik.com

ಹೊಸದಿಲ್ಲಿ: ವೈದ್ಯರ ಅಚಾತುರ್ಯದಿಂದ ಎಡಗಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದ ಬಾಲಕನ ಬಲಗಣ್ಣು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿನ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಈ ಘಟನೆಯು ನವೆಂಬರ್ 12ರಂದು ಸೆಕ್ಟರ್ ಗಮ್ಮ 1ರಲ್ಲಿರುವ ಆನಂದ್ ಸ್ಪೆಕ್ಟ್ರಮ್ ಆಸ್ಪತ್ರೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಬಾಲಕನ ತಂದೆ ನಿತಿನ್ ಭಾಟಿ ಪ್ರಕಾರ, ತಮ್ಮ ಪುತ್ರನ ಎಡಗಣ್ಣಿನಲ್ಲಿ ಪದೇ ಪದೇ ನೀರು ಸೋರುತ್ತಿದ್ದುದರಿಂದ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷೆಯ ನಂತರ, ತಮ್ಮ ಪುತ್ರನ ಕಣ್ಣಿನಲ್ಲಿ ಪ್ಲಾಸ್ಟಿಕ್ ನಂತಹ ವಸ್ತುವಿದ್ದು, ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬಹುದಾಗಿದೆ ಎಂದು ವೈದ್ಯರಾದ ಆನಂದ್ ವರ್ಮ ತಿಳಿಸಿದ್ದರು ಎಂದು ಹೇಳಿದ್ದಾರೆ.

ಶಸ್ತ್ರಚಕಿತ್ಸೆಯ ವೆಚ್ಚ ರೂ. 45,000 ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಬಾಲಕ ಯುಧಿಷ್ಠಿರನಿಗೆ ವೈದ್ಯರು ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ನಂತರ, ಆತ ಮನೆಗೆ ಮರಳಿದಾಗ, ತಪ್ಪಾದ ಕಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಿರುವುದನ್ನು ಬಾಲಕನ ತಾಯಿ ಗಮನಿಸಿದ್ದಾರೆ. ಇದರ ಬೆನ್ನಿಗೇ, ಬಾಲಕನ ಪೋಷಕರು ವೈದ್ಯರೊಂದಿಗೆ ವಾಗ್ವಾದ ನಡೆಸಿದ್ದಾರೆ. ಆದರೆ, ವೈದ್ಯರು ಹಾಗೂ ಅವರ ಸಿಬ್ಬಂದಿಗಳು ಬಾಲಕನ ಪೋಷಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದರಿಂದ ಕುಪಿತಗೊಂಡ ಬಾಲಕನ ಕುಟುಂಬದ ಸದಸ್ಯರು, ಆಸ್ಪತ್ರೆಯಲ್ಲಿ ಗದ್ದಲದ ವಾತಾವರಣ ಸೃಷ್ಟಿಸಿದರಲ್ಲದೆ, ಗೌತಮ್ ಬುದ್ಧ ನಗರದ ಮುಖ್ಯ ವೈದ್ಯಾಧಿಕಾರಿಗೆ ದೂರನ್ನೂ ಸಲ್ಲಿಸಿದ್ದಾರೆ.

ವೈದ್ಯರ ವೃತ್ತಿ ಪರವಾನಗಿಯನ್ನು ರದ್ದುಗೊಳಿಸಬೇಕು ಹಾಗೂ ಆಸ್ಪತ್ರೆಗೆ ಬೀಗಮುದ್ರೆ ಹಾಕಬೇಕು ಎಂದು ಬಾಲಕನ ತಂದೆ ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.

ಈ ಸಂಬಂಧ ತನಿಖೆ ಪ್ರಾರಂಭಗೊಂಡಿದ್ದು, ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದ ಪೊಲೀಸರು ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News