ʼತೆಲಂಗಾಣ ತಾಯಿʼ ಪ್ರತಿಮೆ ಅನಾವರಣಗೊಳಿಸಿದ ಸಿಎಂ ರೇವಂತ್ ರೆಡ್ಡಿ

Update: 2024-12-10 02:53 GMT

PC: x.com/MadhuriDaksha

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಸೋಮವಾರ 'ತೆಲಂಗಾಣ ತಾಯಿ' ಪ್ರತಿಮೆ ಅನಾವರಣ ಮಾಡಿದರು. ಈ ಅಧಿಕೃತ ಪ್ರತಿಮೆಯ ಚಿತ್ರವನ್ನು ಬದಲಾಯಿಸಲು ಯತ್ನಿಸಿದರೆ ಅಥವಾ ಭಾಷಣಗಳ ಮೂಲಕ ಇಲ್ಲವೇ ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಗೊಳಿಸುವ ಪ್ರಯತ್ನ ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸೆಕ್ರೆಟ್ರಿಯೇಟ್ ಆವರಣದಲ್ಲಿ ಸಾವಿರಾರು ಮಂದಿ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯೆಯರು, ಕವಿ, ಕಲಾವಿದರು, ಸಚಿವರು ಮತ್ತು ಚುನಾಯಿತ ಪ್ರತಿನಿಧಿಗಳ ಸಮ್ಮುಖದಲ್ಲಿ ಅವರು ತೆಲಂಗಾಣ ತಾಯಿ ಪ್ರತಿಮೆ ಅನಾವರಣ ಮಾಡಿದರು.

ಈ ಪ್ರತಿಮೆ ತೆಲಂಗಾಣ ಜನತೆಗೆ ಆತ್ಮಗೌರವ ಮತ್ತು ಅಸ್ತಿತ್ವದ ಸಂಕೇತ ಎಂದು ಮುಖ್ಯ ಕಾರ್ಯದರ್ಶಿ ಎ.ಶಾಂತಿ ಕುಮಾರಿ ಹೇಳಿದರು. ಪ್ರತಿಮೆ ಅಥವಾ ಚಿತ್ರವನ್ನು ಸಾರ್ವಜನಿಕವಾಗಿ ಅಥವಾ ಖಾಸಗಿಯಾಗಿ ಯಾವುದೇ ಬದಲಾವಣೆ ಮಾಡಿದಲ್ಲಿ, ರೂಪಾಂತರ ಮಾಡಿದಲ್ಲಿ, ವಿರೂಪಗೊಳಿಸುವುದು, ಧ್ವಂಸಗೊಳಿಸುವುದು, ಅವಮಾನಿಸುವುದು, ದಾಂಧಲೆ ನಡೆಸುವುದು, ತುಂಡರಿಸುವುದು, ನೆಲಸಮಗೊಳಿಸುವುದು ಅಥವಾ ಸುಟ್ಟುಹಾಕಿದಲ್ಲಿ ಇಲ್ಲವೇ ಅಣಕಿಸಿದಲ್ಲಿ ಅದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯಾದ್ಯಂತ ಪ್ರತಿ ವರ್ಷದ ಡಿಸೆಂಬರ್ 9ರಂದು ತೆಲಂಗಾಣ ತಾಯಿ ಅವರಣ ಉತ್ಸವವನ್ನು ಅಧಿಕೃತವಾಗಿ ಆಚರಿಸಲಾಗುತ್ತದೆ. 2009ರ ಈ ದಿನದಂದು ಕೇಂದ್ರ ಸರ್ಕಾರ ಪ್ರತ್ಯೇಕ ತೆಲಂಗಾಣ ರಾಜ್ಯವನ್ನು ಘೋಷಿಸಿದ ದಿನವಾಗಿದೆ.

ಸರ್ಕಾರ ಅನುಮೋದಿಸಿದ ಪ್ರತಿಮೆಯನ್ನು ಅನಾವರಣಗೊಳಿಸುವವರೆಗೆ ತೆಲಂಗಾಣ ತಾಯಿಯ ಯಾವುದೇ ಚಿತ್ರವನ್ನು ಬಿಡುಗಡೆ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಅಲೆ ನರೇಂದ್ರ, ವಿಜಯಶಾಂತಿ, ಕೆ.ಚಂದ್ರಶೇಖರ ರಾವ್ ಹಾಗೂ ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ ಇತರ ಹಲವು ಮಂದಿ ರಾಜ್ಯ ಸ್ಥಾನಮಾನಕ್ಕಾಗಿ ನಡೆದ ಹೋರಾಟದ ವೇಳೆ ತೆಲಂಗಾಣ ತಾಯಿಯ ವಿವಿಧ ರೂಪಗಳನ್ನು ಸೃಷ್ಟಿಸಿದ್ದರು ಎಂದು ಅವರು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News