ಜಾತಿಗಣತಿಗೆ ಕಾಂಗ್ರೆಸ್ ನಾಯಕ ಆನಂದ ಶರ್ಮಾ ವಿರೋಧ

Update: 2024-03-21 16:58 GMT

Photo: PTI

ಹೊಸದಿಲ್ಲಿ, ಮಾ.21: ಜಾತಿ ಗಣತಿ ಕುರಿತ ಕಾಂಗ್ರೆಸ್ ಪಕ್ಷದ ಬೇಡಿಕೆಗೆ ಹಿರಿಯ ಕಾಂಗ್ರೆಸ್ ನಾಯಕ ಆನಂದ ಶರ್ಮಾ ಅವರು ಗುರುವಾರ ವಿರೋಧ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ ಪಕ್ಷವು ಜಾತಿ ಆಧಾರದಲ್ಲಿ ಜನರನ್ನು ಗುರುತಿಸುವ ರಾಜಕೀಯದಲ್ಲಿ ತೊಡಗಿರಲಿಲ್ಲ ಹಾಗೂ ಅದನ್ನು ಬೆಂಬಲಿಸಿರಲಿಲ್ಲ. ಈ ಐತಿಹಾಸಿಕ ನಿಲುವಿನಿಂದ ಯಾವುದೇ ರೀತಿಯಿಂದ ದೂರ ಸರಿಯುವುದು ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿಯವರಿಗೆ ಮಾಡುವ ಅವಮಾನವಾಗಿದೆ ಎಂದು ಅವರು ಪಕ್ಷಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಜಾತಿಯು ಭಾರತೀಯ ಸಮಾಜದ ವಾಸ್ತವತೆಯಾಗಿದ್ದರೂ ಕಾಂಗ್ರೆಸ್ ಪಕ್ಷವು ಯಾವತ್ತೂ ‘ಜಾತಿ ಗುರುತಿನ’ ರಾಜಕೀಯದಲ್ಲಿ ತೊಡಗಿರಲಿಲ್ಲ ಹಾಗೂ ಅದನ್ನು ಬೆಂಬಲಿಸಿರಲಿಲ್ಲ. ವೈವಿಧ್ಯತೆಯಿಂದ ಸಮೃದ್ಧವಾದ ಪ್ರಾಂತ, ಧರ್ಮ, ಜಾತಿ ಹಾಗೂ ಜನಾಂಗವನ್ನು ಹೊಂದಿರುವ ಸಮಾಜದಲ್ಲಿ ಜಾತಿಗಣತಿಯು ಪ್ರಜಾಪ್ರಭುತ್ವಕ್ಕೆ ಹಾನಿಕರವಾಗಿದೆ ಎಂದು ಶರ್ಮಾ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಜಾತಿ ಗಣತಿಯನ್ನು ಇಂದಿರಾ ಹಾಗೂ ರಾಜೀವ್ ಗಾಂಧಿ ಅವರು ವಿರೋಧಿಸಿದ ಎರಡು ನಿದರ್ಶನಗಳನ್ನು ಆನಂದ್ ಶರ್ಮಾ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘‘1980ರಲ್ಲಿ ಇಂದಿರಾಗಾಂಧಿಯವರು ಜಾತಿ ಮೇಲೆ ಬೇಡ, ಕೈ ಚಿಹ್ನೆ ಮೇಲೆ ಮುದ್ರೆಯನ್ನೊತ್ತಿ ಎಂದು ಕರೆ ನೀಡಿದ್ದರು. 1990ರಲ್ಲಿ ಮಂಡಲ್ ಮೀಸಲಾತಿ ಆಂದೋಲನ ನಡೆದ ಸಂದರ್ಭ ಪ್ರತಿಪಕ್ಷ ನಾಯಕ ರಾಜೀವ್ ಗಾಂಧಿ ಅವರು 1990ರಲ್ಲಿ ನಡೆದ 6ನೇ ಲೋಕಸಭಾದಲ್ಲಿ ಐತಿಹಾಸಿಕ ಭಾಷಣವನ್ನುದ್ದೇಶಿಸಿ ಮಾತನಾಡಿದ್ದರು. ‘‘ನಮ್ಮ ದೇಶದಲ್ಲಿ ಜಾತಿವಾದವನ್ನು ಪೋಷಿಸಲು ಜಾತಿಯನ್ನು ವ್ಯಾಖ್ಯಾನಿಸಲು ಹೊರಟಲ್ಲಿ ನಮ್ಮಲ್ಲಿ ಸಮಸ್ಯೆಗಳು ಎದುರಾಗಲಿವೆ. ಸಂಸದೀಯ ಹಾಗೂ ವಿಧಾನಸಭಾ ಕ್ಷೇತ್ರಗಳ ಚುನಾವಣೆಗಳಿಗೂ ಜಾತಿವಾದವನ್ನು ವಿಷಯವಾಗಿ ಬಳಸಿಕೊಂಡಲ್ಲಿ ದೇಶವು ಸಮಸ್ಯೆಗಳನ್ನು ಎದುರಿಸಲಿದೆ ಎಂದು ಹೇಳಿದ್ದಾಗಿ ಆನಂದ್ ಶರ್ಮಾ ತಿಳಿಸಿದ್ದಾರೆ.

ಇಂಡಿಯಾ ಮೈತ್ರಿಕೂಟದ ಕೆಲವು ಪಕ್ಷಗಳು ದೀರ್ಘ ಸಮಯದಿಂದ ಜಾತಿ ಆಧಾರಿತ ರಾಜಕೀಯವನ್ನು ಅನುಸರಿಸುತ್ತಿವೆಯೆಂಬುದಾಗಿಯೂ ಆನಂದ್ ಶರ್ಮಾವಿವರಿಸಿದ್ದಾರೆ.

ದೇಶದಲ್ಲಿ ಪ್ರಚಲಿತದಲ್ಲಿರುವ ನಿರುದ್ಯೋಗ ಹಾಗೂ ಅಸಮಾನತೆಗೆ ಜಾತಿಗಣತಿ ಪರಿಹಾರವಲ್ಲವೆಂದೂ ಶರ್ಮಾ ಅವರು ಪತ್ರದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News