ಲೋಕಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ನನ್ನು ಆರ್ಥಿಕವಾಗಿ ಕುಗ್ಗಿಸಲು ಷಡ್ಯಂತ್ರ ನಡೆಯುತ್ತಿದೆ : ಜೈರಾಮ್ ರಮೇಶ್ ಆರೋಪ
ಹೊಸದಿಲ್ಲಿ : ಬಿಜೆಪಿ ನೇತೃತ್ವದ ಕೇಂದ್ರವು ತನ್ನ ವಿರುದ್ಧ ‘ಆರ್ಥಿಕ ಭಯೋತ್ಪಾದನೆ’ಯಲ್ಲಿ ತೊಡಗಿದೆ ಮತ್ತು ಲೋಕಸಭಾ ಚುನಾವಣೆಗೆ ಮುನ್ನ ಪಕ್ಷವನ್ನು ಆರ್ಥಿಕವಾಗಿ ಕುಗ್ಗಿಸಲು ತನ್ನ ಖಾತೆಗಳಿಂದ 65 ಕೋಟಿ ರೂ.ಗೂ ಅಧಿಕ ಹಣವನ್ನು ಲೂಟಿ ಮಾಡಿದೆ ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿದೆ.
ಬಿಜೆಪಿಯು ಪ್ರಜಾಪ್ರಭುತ್ವದ ಕೊಲೆಗೈಯಲು ಮತ್ತು ದೇಶದಲ್ಲಿ ಸರ್ವಾಧಿಕಾರವನ್ನು ಸ್ಥಾಪಿಸಲು ಯತ್ನಿಸುತ್ತಿದೆ ಎಂದೂ ಕಾಂಗ್ರೆಸ್ ಆಪಾದಿಸಿದೆ.
ಇಲ್ಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಪಕ್ಷದ ನಾಯಕರಾದ ಕೆ.ಸಿ.ವೇಣುಗೋಪಾಲ ಮತ್ತು ಅಜಯ ಮಾಕನ್ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು, ಪಕ್ಷದ ವಿರುದ್ಧ ‘ತೆರಿಗೆ ಭಯೋತ್ಪಾದಕ ದಾಳಿ’ಗಳನ್ನು ನಡೆಸಲಾಗುತ್ತಿದೆ. ಕಾಂಗ್ರೆಸ್ ಅನ್ನು ಆರ್ಥಿಕವಾಗಿ ಕುಗ್ಗಿಸಲು ಷಡ್ಯಂತ್ರವನ್ನು ರೂಪಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುವ ಪ್ರಯತ್ನವಾಗಿದೆ. ಭಾರತ ಜೋಡೊ ನ್ಯಾಯ ಯಾತ್ರೆ,ರೈತರ ಆಂದೋಲನ ಮತ್ತು ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಬಿಜೆಪಿ ಸರಕಾರವು ಕಂಗಾಲಾಗಿದೆ ಎನ್ನುವುದನ್ನು ಇದು ಸೂಚಿಸುತ್ತಿದೆ ಎಂದು ಹೇಳಿದರು.
ಬಿಜೆಪಿ ನೇತೃತ್ವದ ಕೇಂದ್ರವು ಆದಾಯ ತೆರಿಗೆ ಇಲಾಖೆಯ ಮೂಲಕ ಕಾಂಗ್ರೆಸ್ ನ ಐದು ಖಾತೆಗಳಿಂದ 65 ಕೋಟಿ ರೂ.ಗಳನ್ನು ಲೂಟಿ ಮಾಡಿದೆ, ಅದು ಪಕ್ಷದ ವಿರುದ್ಧ ಆರ್ಥಿಕ ಭಯೋತ್ಪಾದನೆಯನ್ನು ಆರಂಭಿಸಿದೆ ಎಂದು ಹೇಳಿದ ಮಾಕನ್, ಬಿಜೆಪಿ ಎಂದಾದರೂ ಆದಾಯ ತೆರಿಗೆಯನ್ನು ಪಾವತಿಸಿದೆಯೇ ಎಂದು ಪ್ರಶ್ನಿಸಿದರು.
‘ನಾವು ನಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು 2019, ಫೆ.2ರಂದು ಸಲ್ಲಿಸಿದ್ದೇವೆ ಮತ್ತು ಈಗ ಐದು ವರ್ಷಗಳ ಬಳಿಕ ಚುನಾವಣೆ ಪ್ರಕಟಗೊಳ್ಳಲು ಕೇವಲ ಎರಡು ವಾರಗಳು ಬಾಕಿಯಿರುವಾಗ ನಮ್ಮ ಖಾತೆಗಳಿಂದ ಹಣವನ್ನು ದೋಚಲಾಗುತ್ತಿದೆ’ ಎಂದು ಅವರು ಆರೋಪಿಸಿದರು.
‘ಸರಕಾರದ ಈ ಕ್ರಮವು ಪ್ರಜಾತಾಂತ್ರಿಕ ತತ್ವಗಳು ಮತ್ತು ಮೌಲ್ಯಗಳ ಮೇಲಿನ ದಾಳಿಯಾಗಿದೆ. ಅವರು ಪ್ರತಿಪಕ್ಷದ ಧ್ವನಿಯನ್ನಡಗಿಸಲು ಪ್ರಯತ್ನಿಸುತ್ತಿದ್ದಾರೆ. ಇತಿಹಾಸದಲ್ಲೆಂದೂ ಇಂತಹ ಕೀಳುಮಟ್ಟದ ದಾಳಿ ನಡೆದಿರಲಿಲ್ಲ. ನಾವು ಇದರ ವಿರುದ್ಧ ಹೋರಾಡುತ್ತೇವೆ. ಇದು ಸರ್ವಾಧಿಕಾರದ ಸ್ಪಷ್ಟ ಉದಾಹರಣೆಯಾಗಿದೆ. ಬಿಜೆಪಿಯು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವನ್ನು ಸರ್ವಾಧಿಕಾರದತ್ತ ತಳ್ಳುತ್ತಿದೆ’ ಎಂದು ವೇಣುಗೋಪಾಲ ಹೇಳಿದರು.