ಹರ್ಯಾಣ ಸೋಲಿನ ಬಗ್ಗೆ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು: ಉಮರ್ ಅಬ್ದುಲ್ಲಾ

Update: 2024-10-09 08:38 GMT

ಉಮರ್ ಅಬ್ದುಲ್ಲಾ (Photo: PTI) 

ಶ್ರೀನಗರ: ಹರ್ಯಾಣ ವಿಧಾನಸಭಾ ಚುನಾವಣೆಯ ಸೋಲಿಗೆ ಕಾರಣಗಳ ಕುರಿತು ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಕರೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟವಾಗಿ ಸ್ಪರ್ಧಿಸಿದ್ದವು.

“ನಾನು ಈಗಾಗಲೇ ಹೇಳಿರುವಂತೆ ಈ ಚುನಾವಣೋತ್ತರ ಸಮೀಕ್ಷೆಗಳಿಗೆ ನಾವು ಸಮಯವನ್ನು ವ್ಯರ್ಥ ಮಾಡುತ್ತಿದ್ದೇವೆ. ಆದರೆ, ಯಾರೂ ಕೂಡಾ ಚುನಾವಣೋತ್ತರ ಸಮೀಕ್ಷೆ ಇಷ್ಟರ ಮಟ್ಟಿಗೆ ಸುಳ್ಳಾಗಬಹುದು ಎಂದು ನಿರೀಕ್ಷಿಸಿರಲಿಲ್ಲ. ಒಂದು ವೇಳೆ 20ರ ಸ್ಥಾನದಲ್ಲಿ 18 ಅಥವಾ 22ರ ಸ್ಥಾನದಲ್ಲಿ 20 ಇದ್ದಿದ್ದರೆ ನಾವು ಅರ್ಥ ಮಾಡಿಕೊಳ್ಳಬಹುದಿತ್ತು. ಆದರೆ, ಏನಾಗಿದೆಯೆಂದರೆ, ಅರವತ್ತು ಮೂವತ್ತಾಗಿದೆ, ಮೂವತ್ತು ಅರವತ್ತಾಗಿದೆ” ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಹೇಳಿದ್ದಾರೆ.

“ಹರ್ಯಾಣ ವಿಧಾನಸಭಾ ಚುನಾವಣೆ ಸೋಲಿನ ಕಾರಣಗಳ ಕುರಿತು ಕಾಂಗ್ರೆಸ್ ಪಕ್ಷವು ಆಳವಾದ ಆತ್ಮಾವಲೋಕನ ಮಾಡಿಕೊಳ್ಳಬೇಕು” ಎಂದು ಅವರು ಕಿವಿಮಾತು ಹೇಳಿದ್ದಾರೆ.

“ನನ್ನ ಕೆಲಸ ನ್ಯಾಷನಲ್ ಕಾನ್ಫರೆನ್ಸ್ ಅನ್ನು ಮುನ್ನಡೆಸುವುದು ಹಾಗೂ ಮೈತ್ರಿ ಪಕ್ಷಗಳಿಗೆ ನೆರವು ನೀಡುವುದು. ನಾನದನ್ನು ಮಾಡಲಿದ್ದೇನೆ” ಎಂದೂ ಅವರು ಹೇಳಿದ್ದಾರೆ.

ಹರ್ಯಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News