ಪಠ್ಯ ಪುಸ್ತಕಗಳಿಂದ ಸಂವಿಧಾನದ ಪ್ರಸ್ತಾವನೆ ಕೈಬಿಟ್ಟ NCERT | ರಾಜ್ಯಸಭೆಯಲ್ಲಿ ಧ್ವನಿ ಎತ್ತಿದ ಕಾಂಗ್ರೆಸ್

Update: 2024-08-07 15:03 GMT

 ಮಲ್ಲಿಕಾರ್ಜುನ ಖರ್ಗೆ | PC : PTI

ಹೊಸದಿಲ್ಲಿ : ನಿರ್ದಿಷ್ಟ ಎನ್ಸಿಇಆರ್ಟಿ ಪಠ್ಯ ಪುಸ್ತಕಗಳಲ್ಲಿ ಸಂವಿಧಾನದ ಪ್ರಸ್ತಾವನೆ ಕೈಬಿಟ್ಟಿರುವ ವಿಷಯದ ಕುರಿತಂತೆ ಪ್ರತಿಪಕ್ಷವಾದ ಕಾಂಗ್ರೆಸ್ ಬುಧವಾರ ರಾಜ್ಯ ಸಭೆಯಲ್ಲಿ ಧ್ವನಿ ಎತ್ತಿತು.

ಇದು ದೇಶದ ಮೇಲೆ ಕೋಮು ಸಿದ್ಧಾಂತವನ್ನು ಹೇರುವ ಪ್ರಯತ್ನವಾಗಿದೆ ಎಂದು ಅದು ಹೇಳಿತು. ಈ ಹೇಳಿಕೆಯನ್ನು ವಿರೋಧಿಸಿದ ಕೇಂದ್ರ ಸಚಿವ ಜೆ.ಪಿ. ನಡ್ಡಾ, ಸಂವಿಧಾನವನ್ನು ರಕ್ಷಿಸುವಲ್ಲಿ ಸರಕಾರ ಬದ್ಧವಾಗಿದೆ ಎಂದರು.

ಈ ವಿಷಯದ ಕುರಿತು ಧ್ವನಿ ಎತ್ತಿದ ರಾಜ್ಯ ಸಭೆಯ ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಭಾರತದ ಸಂವಿಧಾನದ ಆತ್ಮ ಹಾಗೂ ಅಡಿಪಾಯವಾಗಿರುವ ಪ್ರಸ್ತಾವನೆಯನ್ನು ಎನ್ಸಿಇಆರ್ಟಿ ಪಠ್ಯ ಪುಸ್ತಕಗಳಲ್ಲಿ ಪ್ರಕಟಿಸಬೇಕಿತ್ತು ಎಂದರು.

ಎಲ್ಲಾ ನಾಗರಿಕರ ನ್ಯಾಯ, ಸ್ವಾತಂತ್ರ್ಯ, ಸಮಾನತೆಯನ್ನು ರಕ್ಷಿಸುವ, ದೇಶದ ಏಕತೆ ಹಾಗೂ ಸಮಗ್ರತೆಯನ್ನು ನಿರ್ವಹಿಸಲು ಭಾತೃತ್ವವನ್ನು ಉತ್ತೇಜಿಸುವ ಉದ್ದೇಶವನ್ನು ಪ್ರಸ್ತಾವನೆ ಹೊಂದಿದೆ ಎಂದು ಅವರು ಹೇಳಿದರು. ಅವರು 1948 ನವೆಂಬರ್ನಲ್ಲಿ ನಡೆದ ಸಂವಿಧಾನ ಸಭೆಯ ಚರ್ಚೆಯನ್ನು ಓದಿದರು. ಆ ಚರ್ಚೆಯಲ್ಲಿ ಪಾಲ್ಗೊಂಡವರು ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾಪ್ರಭುತ್ವವನ್ನಾಗಿ ಕೂಡ ಮಾಡಬೇಕು ಎಂದು ವಾದಿಸಿದ್ದರು ಎಂದು ತಿಳಿಸಿದರು.

ಪಠ್ಯಕ್ರಮವನ್ನು ತಿರುಚುವ ಮೂಲಕ ಆರ್ಎಸ್ಎಸ್ ಹಾಗೂ ಬಿಜೆಪಿ ಜನರಲ್ಲಿ ಕೋಮು ಸಿದ್ಧಾಂತವನ್ನು ಹೇರಲು ಪ್ರಯತ್ನಿಸುತ್ತಿದೆ. ಎನ್ಸಿಇಆರ್ಟಿ ತೆಗೆದುಕೊಂಡ ನಿರ್ಧಾರ ಸರಿಯಾದುದಲ್ಲ ಎಂದು ಅವರು ಹೇಳಿದರು.

ಈ ವಿಷಯದ ಕುರಿತು ಸ್ಪಷ್ಟನೆ ನೀಡುವಂತೆ ಖರ್ಗೆ ಸರಕಾರವನ್ನು ಆಗ್ರಹಿಸಿದರು. ಪ್ರಸಕ್ತ ಸತ್ಯ ಸದನದ ಮುಂದಿದೆ. ಪಠ್ಯ ಪುಸ್ತಕಗಳಿಂದ ಪ್ರಸ್ತಾವನೆಯನ್ನು ಕೈಬಿಡುವ ನಿರ್ಧಾವನ್ನು ಹಿಂಪಡೆಯಿರಿ ಎಂದು ಅವರು ಆಗ್ರಹಿಸಿದರು.

ಇದಕ್ಕೆ ಸಭಾಪತಿ ಧನ್ಕರ್, ನಿಸ್ಸಂದೇಹವಾಗಿ ನಾವೆಲ್ಲರೂ ಸಂವಿಧಾನಕ್ಕೆ ಬದ್ಧರಾಗಿದ್ದೇವೆ. ಇದಕ್ಕೆ ವಿರುದ್ಧವಾದ ಯಾವುದೇ ಗ್ರಹಿಕೆ ನಮಗೆ ನೋವುಂಟು ಮಾಡುತ್ತದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News