ಕಂಗನಾ ರಾಣಾವತ್ ಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಕಪ್ಪು ಬಾವುಟ ಪ್ರದರ್ಶನ
ಶಿಮ್ಲಾ : ಲಾಹಾವುಲ್ ಹಾಗೂ ಸ್ಪಿಟಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಹಿಮಾಚಲಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಅವರಿಗೆ ಸ್ಥಳೀಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿದ ಘಟನೆ ಸೋಮವಾರ ನಡೆದಿದೆ. ಕಂಗನಾ ಅವರ ಬೆಂಗಾವಲು ವಾಹನಗಳ ಮೇಲೆ ಕಲ್ಲೆಸೆಯಲಾಗಿದೆಯೆಂದು ಬಿಜೆಪಿ ಆಪಾದಿಇದೆ.
‘ಕಂಗನಾ ವಂಗನಾ ನಹಿ ಚಲೇಗಿ’, ‘ಕಂಗನಾ ಗೋ ಬ್ಯಾಕ್’ ಇತ್ಯಾದಿ ಘೋಷಣೆಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಕೂಗಿದ್ದಾರೆ. ಟಿಬೆಟ್ ಅಧ್ಯಾತ್ಮಿಕ ಧರ್ಮಗುರು ದಲಾಯಿ ಲಾಮಾ ಬಗ್ಗೆ ಕಂಗನಾ ಅವರು ಕಳೆದ ವರ್ಷದ ಎಪ್ರಿಲ್ ನೀಡಿದ ವಿವಾದಿತ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಚುನಾವಣಾ ಪ್ರಚಾರ ಸಭೆಯನ್ನು ಕೆಡಿಸಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದ್ದಾರೆ ಹಾಗೂ ತಾವು ಹಿಂತಿರುಗುತ್ತಿದ್ದಾಗ ತಮ್ಮ ಕಾರಿಗೆ ಕಲ್ಲೆಸೆದಿದ್ದಾರೆಂದು ಹಿಮಾಚಲಪ್ರದೇಶದ ಪ್ರತಿಪಕ್ಷ ನಾಯಕ ಜೈ ರಾಮ್ ಠಾಕೂರ್ ಆಪಾದಿಸಿದ್ದಾರೆ.
‘‘ಅಮೆರಿಕದ ಶ್ವೇತಭವನಕ್ಕೆ ಭೇಟಿ ನೀಡಿದ ಸಂದರ್ಭ ದಲಾಯಿ ಲಾಮಾ ಅವರು ಜೊಬೈಡೆನ್ ಜೊತೆ ಫೋಟೋ ತೆಗೆಸಿಕೊಂಡ ಸಂದರ್ಭ ತನ್ನ ನಾಲಗೆಯನ್ನು ಹೊರಚಾಚಿರುವ ಛಾಯಾಚಿತ್ರವನ್ನು ಕಂಗನಾ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ವ್ಯಂಗ್ಯವಾಡಿದ್ದರು. ದಲಾಯಿಲಾಮಾ ಹಾಗೂ ಬೈಡೆನ್ ಇಬ್ಬರಿಗೂ ಒಂದೇ ರೀತಿಯ ಕಾಯಿಲೆಯಿದೆ. ಹೀಗಾಗಿ ಖಂಡಿತವಾಗಿಯೂ ಇಬ್ಬರೂ ಗೆಳೆಯರಾಗಬಹುದು’’ ಎಂದು ಅವರು ಮೀಮ್ ಮಾಡಿದ್ದರು.
ಕಂಗನಾ ಅವರ ಟ್ವೀಟ್ ಗೆ ಆಗ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಮುಂಬೈಯಲ್ಲಿರುವ ಆಕೆಯ ಕಚೇರಿಯ ಮುಂದೆ ಬೌದ್ಧ ಧರ್ಮೀಯರು ಧರಣಿ ನಡೆಸಿದ್ದರು. ಆನಂತರ ತನ್ನ ಪೋಸ್ಟ್ ಗೆ ಕಂಗನಾ ಕ್ಷಮೆ ಯಾಚಿಸಿದ್ದರು. ಇದೊಂದು ಅಪಾಯಕಾರಿಯಲ್ಲದ ಜೋಕ್ ಆಗಿದ್ದು, ಯಾರಿಗೂ ನೋವುಂಟು ಮಾಡುವ ಉದ್ದೇಶವಿರಲಿಲ್ಲ ಎಂದು ಕಂಗನಾ ಹೇಳಿದ್ದರು