ಒಬಿಸಿ ಪಟ್ಟಿಯಲ್ಲಿ ಜಾತಿಗಳ ಸೇರ್ಪಡೆ ಕುರಿತ ವಿವಾದ | ದತ್ತಾಂಶ ಸಲ್ಲಿಸಲು ಪಶ್ಚಿಮ ಬಂಗಾಳಕ್ಕೆ ಸುಪ್ರೀಂ ಸೂಚನೆ

Update: 2024-08-05 15:48 GMT

ಸುಪ್ರೀಂ ಕೋರ್ಟ್ 

ಹೊಸದಿಲ್ಲಿ : ಮಹತ್ವದ ಬೆಳವಣಿಗೆಯೊಂದರಲ್ಲಿ, ಇತರ ಹಿಂದುಳಿದ ವರ್ಗ (ಒಬಿಸಿ) ಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿರುವ ಹೊಸ ಜಾತಿಗಳ ಸಾಮಾಜಿಕ, ಆರ್ಥಿಕ ಹಿಂದುಳಿದಿರುವಿಕೆ ಹಾಗೂ ಸರಕಾರಿ ಉದ್ಯೋಗಗಳಲ್ಲಿ ಅವರ ಅಸಮರ್ಪಕ ಪ್ರಾತಿನಿಧ್ಯದ ಕುರಿತು ಪ್ರಮಾಣೀಕರಿಸಬಹುದಾದ ದತ್ತಾಂಶವನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ಪಶ್ಚಿಮಬಂಗಾಳ ಸರಕಾರಕ್ಕೆ ಸೋಮವಾರ ಸೂಚಿಸಿದೆ.

ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ 77 ಜಾತಿಗಳನ್ನು ಸೇರ್ಪಡೆಗೊಳಿಸಿರುವುದರ ವಿರುದ್ಧ ಖಾಸಗಿ ಅರ್ಜಿದಾರರು ಕೋಲ್ಕತ್ತಾ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ 77 ಜಾತಿಗಳಲ್ಲಿ ಮುಸ್ಲಿಮರೇ ಹೆಚ್ಚು ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.

ಸರಕಾರಿ ವಲಯದ ಉದ್ಯೋಗಗಳು ಹಾಗೂ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಅವರಿಗೆ ಮೀಸಲಾತಿ ನೀಡುವುದು ಕಾನೂನು ಬಾಹಿರವೆಂದು ಪರಿಗಣಿಸಿ ಪಶ್ಚಿಮಬಂಗಾಳ ಸರಕಾರ 2010ರಲ್ಲಿ ಹಲವು ಜಾತಿಗಳಿಗೆ ನೀಡಿದ್ದ ಇತರ ಹಿಂದುಳಿದ ವರ್ಗಗಳ ಸ್ಥಾನವನ್ನು ಉಚ್ಚ ನ್ಯಾಯಾಲಯ ಮೇ 22ರಂದು ರದ್ದುಗೊಳಿಸಿತ್ತು.

ಮೇಲ್ಮನವಿ ಮೇಲೆ ನೋಟಿಸ್ ಜಾರಿ ಮಾಡುವ ಮುನ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ್, ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠ ತೃಣಮೂಲ ಕಾಂಗ್ರೆಸ್ ನೇತೃತ್ವದ ಪಶ್ಚಿಮಬಂಗಾಳ ಸರಕಾರದ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರ ಪ್ರತಿಪಾದನೆಯನ್ನು ಗಮನಕ್ಕೆ ತೆಗೆದುಕೊಂಡಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News