ಹಸೀನಾಗೆ ಬೆಂಬಲ ನೀಡಿದರೆ ಭಾರತದ ಜತೆ ಸಹಕಾರ ಕಷ್ಟ: ಬಿಎನ್ ಪಿ

Update: 2024-08-09 04:43 GMT

PC: PTI

ಹೊಸದಿಲ್ಲಿ: ಪದಚ್ಯುತಗೊಂಡು ಸೋಮವಾರ ಢಾಕಾ ತ್ಯಜಿಸಿ ದೆಹಲಿಗೆ ಆಗಮಿಸಿರುವ ಬಾಂಗ್ಲಾದೇಶದ ಪ್ರಧಾನಿ ಹಾಗೂ ಅವಾಮಿ ಲೀಗ್ ನಾಯಕಿ ಶೇಖ್ ಹಸೀನಾ ಅವರಿಗೆ ಆತಿಥ್ಯ ನೀಡಿರುವ ಭಾರತದ ಕ್ರಮಕ್ಕೆ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ ಪಿ) ಬಹಿರಂಗ ವಿರೋಧ ವ್ಯಕ್ತಪಡಿಸಿದೆ.

ಬಿಎನ್ ಪಿ ನೇತೃತ್ವದ ಸರ್ಕಾರದಲ್ಲಿ 1991ರಲ್ಲಿ ಸಚಿವರಾಗಿದ್ದ ಹಾಗೂ ಪಕ್ಷದ ಸ್ಥಾಯಿ ಸಮಿತಿ ಸದಸ್ಯರೂ ಆಗಿರುವ ಹಿರಿಯ ಮುಖಂಡ ಗಯೇಶ್ವರ ರಾಯ್ ಈ ಬಗ್ಗೆ ಹೇಳಿಕೆ ನೀಡಿ, "ಬಾಂಗ್ಲಾದೇಶ ಹಾಗೂ ಭಾರತದ ನಡುವೆ ಪರಸ್ಪರ ಸಹಕಾರ ಸಾಧಿಸುವಲ್ಲಿ ಬಿಎನ್ ಪಿ ನಂಬಿಕೆ ಇಟ್ಟಿದೆ. ಭಾರತ ಇದನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಇದನ್ನು ಪಾಲಿಸುವ ರೀತಿಯಲ್ಲಿ ವರ್ತಿಸಬೇಕು. ಆದರೆ ನೀವು ನಮ್ಮ ವಿರೋಧಿಗೆ ನೆರವು ನೀಡಿದರೆ ಪರಸ್ಪರ ಸಹಕಾರವನ್ನು ಗೌರವಿಸುವುದು ಕಷ್ಟಸಾಧ್ಯವಾಗುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ.

"ಶೇಖ್ ಹಸೀನಾ ಮತ್ತೆ ಅಧಿಕಾರಕ್ಕೆ ಬರಲು ಭಾರತ ನೆರವಾಗಿದೆ ಎಂದು ನಮ್ಮ ಹಿಂದಿನ ವಿದೇಶಾಂಗ ಸಚಿವರು ಹೇಳಿಕೆ ನೀಡಿದ್ದರು. ಶೇಖ್ ಹಸೀನಾ ಅವರ ಉತ್ತರಾಯಿತ್ವದ ಹೊಣೆಯನ್ನು ಭಾರತ ಹೊರಬೇಕು. ಭಾರತ ಹಾಗೂ ಬಾಂಗ್ಲಾದೇಶದ ಜನರ ನಡುವೆ ಸಮಸ್ಯೆಗಳಿಲ್ಲ. ಆದರೆ ಭಾರತ ಇಡೀ ದೇಶದ ಬದಲು ಒಂದು ಪಕ್ಷಕ್ಕೆ ಉತ್ತೇಜನ ನೀಡಬೇಕೇ" ಎಂದು ಅವರು ಪ್ರಶ್ನಿಸಿದ್ದಾರೆ.

ಹಿಂದೂಗಳ ಮೇಲೆ ದಾಳಿ ನಡೆದಿದೆ ಎಂಬ ಬಗ್ಗೆ ಮತ್ತು ಬಿಎನ್ ಪಿ ಅಲ್ಪಸಂಖ್ಯಾತ ವಿರೋಧಿ ಎಂಬ ಆರೋಪಗಳ ಬಗ್ಗೆ ಗಮನ ಸೆಳೆದಾಗ, "ಬಿಎನ್ ಪಿ ಹಿಂದೂ ವಿರೋಧಿ ಎಂಬ ಭಾವನೆ ಸೃಷ್ಟಿಸಲಾಗಿದೆ. ಬಿಎನ್ ಪಿ ಬಾಂಗ್ಲಾದೇಶದಲ್ಲಿರುವ ವಿವಿಧ ಸಮುದಾಯಗಳಿಂದ ರೂಪಿತವಾದ ಪಕ್ಷ. ಎಲ್ಲ ಧರ್ಮಗಳ ಪರವಾಗಿ ನಿಲ್ಲುತ್ತದೆ. ಈ ಪಕ್ಷದ ಆಡಳಿತದಲ್ಲಿ ನಾನು ಸಚಿವನಾಗಿದ್ದೆ ಹಾಗೂ ಎಲ್ಲ ಧರ್ಮಗಳ ಪರವಾಗಿ ನಿಂತಿದ್ದೆ. ಬಾಂಗ್ಲಾದೇಶದ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ವೇದಿಕೆಯ ಸದಸ್ಯನಾಗಿದ್ದೆ. ಬಿನ್ ಪಿ ರಾಷ್ಟ್ರೀಯವಾದಿ ಪಕ್ಷ ಹಾಗೂ ಎಲ್ಲ ಸಮುದಾಯಗಳ ವೈಯಕ್ತಿಕ ಹಕ್ಕುಗಳನ್ನು ಗೌರವಿಸುತ್ತದೆ" ಎಂದು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News