ಬಿಜೆಪಿಯಿಂದ ಕಾಂಗ್ರೆಸ್ ಗ್ಯಾರಂಟಿಗಳ ನಕಲು : ಖರ್ಗೆ ಆರೋಪ
ಹೊಸದಿಲ್ಲಿ: ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಉದ್ದೇಶದಿಂದ ಜನರನ್ನು ಒಲೈಸಲು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು ನಕಲು ಮಾಡಿ, ಅವುಗಳನ್ನು ತಮ್ಮ ಕಾರ್ಯಸೂಚಿಯಲ್ಲಿ ಸೇರ್ಪಡೆಗೊಳಿಸಿದ್ದಾರೆಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಆಪಾದಿಸಿದ್ದಾರೆ.
‘‘ಬಿಜೆಪಿಗೆ ಯಾವುದೇ ಉದ್ದೇಶಗಳಾಗಲಿ ಅಥವಾ ನೀತಿಗಳಾಗಲಿ ಇಲ್ಲ. ರಾಜಸ್ಥಾನ ಮತ್ತಿತರ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ಗ್ಯಾರಂಟಿಗಳ ರೂಪದಲ್ಲಿ ದೃಢವಾದ ಜನ ಕಲ್ಯಾಣ ಕಾರ್ಯಕ್ರಮಗಳನ್ನು ನೀಡಿದೆ’’ ಎಂದು ಖರ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘‘ನಮ್ಮ ಪಕ್ಷದ ಮೂಲ ಗ್ಯಾರಂಟಿಗಳನ್ನು ನಕಲು ಮಾಡುವುದು ಒಳಿತೆಂದು ಮೋದಿ ಹಾಗೂ ಬಿಜೆಪಿ ಭಾವಿಸಿದ್ದಾರೆ. ಚುನಾವಣೆಗೆ ಮುನ್ನ ತಮ್ಮ ಕಾರ್ಯಸೂಚಿಯನ್ನು ಅವಸರವಸರವಾಗಿ ಮಂಡಿಸಲು ಅವರು ವಿಫಲ ಯತ್ನಗಳನ್ನು ನಡೆಸಿದರು’’ ಎಂದು ಖರ್ಗೆ ಹಿಂದಿಯಲ್ಲಿ ಬರೆದಿರುವ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಕೆಲಸ ಮಾಡುತ್ತಿದೆ ಹಾಗೂ ಅದು ನೀಡಿರುವ ಏಳು ಖಾತರಿಗಳನ್ನು ಕೂಡಾ ಈಡೇರಿಸಲಿದೆ ಎಂಬುದು ರಾಜಸ್ಥಾನದ ಜನರಿಗೆ ತಿಳಿದಿದೆ ಎಂದು ಖರ್ಗೆ ಹೇಳಿದ್ದಾರೆ.
ರಾಜಸ್ತಾನ ವಿಧಾನಸಭೆಗೆ ನ.25ರಂದು ಮತದಾನ ನಡೆಯಲಿದೆ.