ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿಯ ಮಗಳು, ಅಳಿಯನೆಂದು ವಂಚನೆ | ದಂಪತಿ ಬಂಧನ

Update: 2024-12-31 07:39 GMT

ಬಂಧಿತರು (Photo credit: indiatoday.in)

ಭುವನೇಶ್ವರ : ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ ಅವರ ಮಗಳು ಮತ್ತು ಅಳಿಯನಂತೆ ನಟಿಸಿ ಜನರನ್ನು ವಂಚಿಸುತ್ತಿದ್ದ ದಂಪತಿಯನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ದಂಪತಿಯನ್ನು ಹನ್ಸಿತಾ ಅಭಿಲಿಪ್ಸಾ ಮತ್ತು ಅನಿಲ್ ಕುಮಾರ್ ಮೊಹಂತಿ ಎಂದು ಗುರತಿಸಲಾಗಿದೆ. ಇಬ್ಬರು ಸೇರಿಕೊಂಡು ನಮಗೆ ಪ್ರಭಾವಿ ವ್ಯಕ್ತಿಗಳ ಸಂಪರ್ಕವಿದೆ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದರು ಎನ್ನಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 329(3), 319(2), 318(4) ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಭುವನೇಶ್ವರದ ವಲಯ 6ರ ಹೆಚ್ಚುವರಿ ಡಿಸಿಪಿ ಸ್ವರಾಜ್ ದೇಬ್ತಾ ತಿಳಿಸಿದ್ದಾರೆ.

ಆರೋಪಿಗಳು ತಮ್ಮ ಮನೆಯಲ್ಲಿ ಗಣ್ಯರ ಜೊತೆಗೆ ತೆಗೆಸಿಕೊಂಡಿರುವ ಫೋಟೋಗಳನ್ನು ಮನೆಯ ಗೋಡೆಗಳಲ್ಲಿ ಅಳವಡಿಸಿಕೊಂಡಿದ್ದರು ಎನ್ನಲಾಗಿದೆ. ಅವುಗಳು ನಕಲಿ ಎನ್ನಲಾಗಿದ್ದು, ಪೊಲೀಸರು ಫೊಟೋಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹನ್ಸಿತಾ ಮತ್ತು ಮೊಹಂತಿ ದಂಪತಿ ಐಷಾರಾಮಿ ಕಟ್ಟಡದಲ್ಲಿ ವಾಸವಿದ್ದರು. ಗಣ್ಯ ವ್ಯಕ್ತಿಗಳ ಜೊತೆಗಿರುವ ನಕಲಿ ಛಾಯಾಚಿತ್ರಗಳನ್ನು ಮುದ್ರಿಸಿ ಭುವನೇಶ್ವರದ ಶ್ರೀಮಂತ ಉದ್ಯಮಿಗಳು, ಬಿಲ್ಡರ್ಗಳು, ಗಣಿಗಾರಿಕೆ ನಿರ್ವಾಹಕರು ಮತ್ತು ಇತರ ಪ್ರಭಾವಿ ವ್ಯಕ್ತಿಗಳನ್ನು ವಂಚಿಸುತಿದ್ದರು. ಸರಕಾರದ ಟೆಂಡರ್ ಪಾಸ್ ಮಾಡಲು ಸಹಾಯ ಮಾಡುವುದಾಗಿ ಸುಳ್ಳು ಭರವಸೆ ನೀಡುತ್ತಿದ್ದರು ಎನ್ನಲಾಗಿದೆ. ಈ ಕುರಿತು ಗಣಿ ಮಾಲೀಕರೊಬ್ಬರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೆತ್ತಕೊಂಡ ವೇಳೆ ದಂಪತಿಗಳ ನಕಲಿ ಮುಖ ಬಯಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News