ರಾಜ್ಯಸಭಾ ಸದಸ್ಯನಾಗಿ ಪ್ರಮಾಣವಚನ ಸ್ವೀಕಾರಕ್ಕೆ ಆಪ್ ನಾಯಕ ಸಂಜಯ ಸಿಂಗ್ ಗೆ ಕೋರ್ಟ್ ಅಸ್ತು

Update: 2024-02-07 17:15 GMT

ಸಂಜಯ ಸಿಂಗ್ | Photo: PTI

ಹೊಸದಿಲ್ಲಿ: ಈಗ ರದ್ದುಗೊಂಡಿರುವ ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ 2023,ಅಕ್ಟೋಬರ್ ನಿಂದ ಬಂಧನದಲ್ಲಿರುವ ಆಪ್ ಸಂಸದ ಸಂಜಯ್ ಸಿಂಗ್ ಅವರು ಸತತ ಎರಡನೇ ಅವಧಿಗೆ ರಾಜ್ಯಸಭಾ ಸದಸ್ಯನಾಗಿ ಪ್ರಮಾಣ ವಚನವನ್ನು ಸ್ವೀಕರಿಸಲು ದಿಲ್ಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಅನುಮತಿ ನೀಡಿದೆ.

ಫೆ.8 ಅಥವಾ 9ರಂದು ಪ್ರಮಾಣವಚನವನ್ನು ಸ್ವೀಕರಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಿದ ವಿಶೇಷ ನ್ಯಾಯಾಧೀಶ ಎಂ.ಕೆ.ನಾಗಪಾಲ್ ಅವರು ಈ ಆದೇಶವನ್ನು ಹೊರಡಿಸಿದರು.

ನ್ಯಾಯಾಲಯವು ಈ ಹಿಂದೆ ಫೆ.5ರಂದು ಪ್ರಮಾಣವಚನ ಸ್ವೀಕಾರಕ್ಕಾಗಿ ರಾಜ್ಯಸಭೆಗೆ ತೆರಳಲು ಸಿಂಗ್ಗೆ ಅನುಮತಿಯನ್ನು ನೀಡಿತ್ತು. ಆದರೆ ಅಂದು ಸದನದ ಕಲಾಪಗಳಲ್ಲಿ ಪ್ರಮಾಣ ವಚನ ಸ್ವೀಕಾರವನ್ನು ಪಟ್ಟಿ ಮಾಡಿರದ್ದರಿಂದ ಸಿಂಗ್ ಬರಿಗೈಯಲ್ಲಿ ಮರಳಿದ್ದರು.

ನಿಗದಿತ ದಿನದಂದು ಬೆಳಿಗ್ಗೆ 10 ಗಂಟೆಗೆ ಸಿಂಗ್ ಅವರನ್ನು ರಾಜ್ಯಸಭೆಗೆ ಕರೆದೊಯ್ಯುವುದನ್ನು ಮತ್ತು ಪ್ರಮಾಣವಚನ ಸ್ವೀಕಾರದ ಬಳಿಕ ಅವರನ್ನು ಸುರಕ್ಷಿತವಾಗಿ ಜೈಲಿಗೆ ಮರಳಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಜೈಲು ಅಧೀಕ್ಷಕರಿಗೆ ನ್ಯಾಯಾಲಯವು ನಿರ್ದೇಶನ ನೀಡಿದೆ.

ಸಿಂಗ್ ಜೊತೆಗೆ ವಕೀಲರು ಮತ್ತು ಕುಟುಂಬ ಸದಸ್ಯರ ಉಪಸ್ಥಿತಿಗೂ ನ್ಯಾಯಾಲಯವು ಅವಕಾಶವನ್ನು ನೀಡಿದೆ.

ಹಕ್ಕುಬಾಧ್ಯತೆಗಳ ಸಮಿತಿಯು ತನ್ನ ವರದಿಯನ್ನು ಸಲ್ಲಿಸುವವರೆಗೂ ಸಿಂಗ್ ಅಮಾನತಿನಲ್ಲಿರುತ್ತಾರೆ ಮತ್ತು ಸಮಿತಿಯ ವರದಿಯನ್ನು ಆಧರಿಸಿ ಸದನವು ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ರಾಜ್ಯಸಭೆಯು ತನ್ನ 2023,ಆ.1ರ ಆದೇಶದಲ್ಲಿ ತಿಳಿಸಿತ್ತು. ಸಮಿತಿಯ ಸಭೆಯು ಈವರೆಗೆ ನಿಗದಿಯಾಗಿಲ್ಲ.

ಅಮಾನತನ್ನು ಹಿಂದೆಗೆದುಕೊಂಡರೆ ಸದನಕ್ಕೆ ಆಗಮಿಸಿ ಪ್ರಮಾಣವಚನವನ್ನು ಸ್ವೀಕರಿಸುವಂತೆ ರಾಜ್ಯಸಭಾ ಸಚಿವಾಲಯವು ಸಿಂಗ್ ಅವರಿಗೆ ಸಮನ್ಸ್ ಹೊರಡಿಸುತ್ತದೆ. ಆದರೆ ಸಿಂಗ್ಗೆ ಈವರೆಗೆ ಸಮನ್ಸ್ ಹೊರಡಿಸಲಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News