ಕೋವ್ಯಾಕ್ಸಿನ್ ಸುರಕ್ಷತಾ ಅಧ್ಯಯನಕ್ಕೆ ಅನುಮೋದನೆ ನೀಡಿಲ್ಲ: ICMR

Update: 2024-05-20 16:53 GMT

PC: bharatbiotech.com

ಹೊಸದಿಲ್ಲಿ: ಕೋವ್ಯಾಕ್ಸಿನ್ ಲಸಿಕೆ ಕುರಿತ ತನ್ನ ಅಧ್ಯಯನ ವರದಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR)ಯು ಅನುಮೋದನೆ ನೀಡಿದೆ ಎಂಬ ಅಂಶವನ್ನು ವರದಿಯಿಂದ ತೆಗೆದುಹಾಕುವಂತೆ ಭಾರತದ ಮಹತ್ವದ ವೈದ್ಯಕೀಯ ಸಂಶೋಧನಾ ಸಂಸ್ಥೆ ICMR, ಅಧ್ಯಯನದ ಲೇಖಕರಿಗೆ ಸೂಚಿಸಿದೆ.

ಕೋವ್ಯಾಕ್ಸಿನ್ ಲಸಿಕೆ ಕುರಿತ ಅಧ್ಯಯನ ವರದಿಯನ್ನು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ(BHU)ವು ಪ್ರಕಟಿಸಿತ್ತು.

ಲಸಿಕೆ ಕುರಿತ ಸಂಶೋಧನೆಗೆ ICMR ಯಾವುದೇ ಹಣಕಾಸು ಅಥವಾ ತಾಂತ್ರಿಕ ಬೆಂಬಲವನ್ನು ನೀಡಿಲ್ಲ ಎಂದು ಅದು ತಿಳಿಸಿದೆ.

ಕೋವ್ಯಾಕ್ಸಿನ್ ಲಸಿಕೆ ಕುರಿತ ಅಧ್ಯಯನಕ್ಕೆ ICMR ಬೆಂಬಲ ನೀಡಿದೆ ಎಂಬುದಾಗಿ ಅಧ್ಯಯನದ ಲೇಖಕರು ತಪ್ಪಾಗಿ ಉಲ್ಲೇಖಿಸಿದ್ದಾರೆ ಎಂದು ICMR ಹೇಳಿಕೊಂಡಿದೆ. ಅದೂ ಅಲ್ಲದೆ, ಅಧ್ಯಯನದಲ್ಲಿ ಮತ್ತು ಅಧ್ಯಯನಕ್ಕೆ ಬಳಸಲಾಗಿರುವ ವಿಧಾನಗಳಲ್ಲಿ ಹಲವಾರು ಗಂಭೀರ ಲೋಪಗಳಿವೆ ಎಂಬುದಾಗಿಯೂ ಅದು ಬೆಟ್ಟು ಮಾಡಿದೆ.

ಕೌರ್ ಮತ್ತು ಇತರರು ಬರೆದ ‘‘ಹದಿಹರಯದವರು ಮತ್ತು ವಯಸ್ಕರ ಮೇಲೆ ಬಿಬಿವಿಐ52 ಕೊರೋನವೈರಸ್ ಲಸಿಕೆಯ ದೀರ್ಘಾವಧಿ ಪರಿಣಾಮಗಳ ವಿಶ್ಲೇಷಣೆ: ಉತ್ತರ ಭಾರತದಲ್ಲಿ ಒಂದು ವರ್ಷ ನಡೆಸಲಾದ ಅಧ್ಯಯನದ ವರದಿ’’ ಎಂಬ ತಲೆಬರಹದ ಅಧ್ಯಯನ ವರದಿಯು ‘ಡ್ರಗ್ ಸೇಫ್ಟಿ’ ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು.

ವರದಿಗೆ ICMR ಅನುಮೋದನೆ ನೀಡಿದೆ ಎಂಬ ಅಂಶವನ್ನು ವರದಿಯಿಂದ ತೆಗೆದುಹಾಕುವಂತೆ ಮತ್ತು ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸೂಚಿಸಿ ಸಂಸ್ಥೆಯ ಮುಖ್ಯಸ್ಥ ರಾಜೀವ್ ಬಹಲ್ ಪತ್ರಿಕೆಗೆ ಪತ್ರವೊಂದನ್ನು ಬರೆದಿದ್ದಾರೆ.

ಕೊರೋನ ವೈರಸ್ ವಿರುದ್ಧ ಕೋಟ್ಯಂತರ ಭಾರತೀಯರಿಗೆ ಲಸಿಕೆ ನೀಡುವುದಕ್ಕಾಗಿ ಭಾರತ ಸರಕಾರವು ಎರಡು ಲಸಿಕೆಗಳನ್ನು ಅಂಗೀಕರಿಸಿತ್ತು. ಅವುಗಳೆಂದರೆ ಆ್ಯಸ್ಟ್ರಝೆನೆಕ ಕಂಪೆನಿಯ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್. ಕೋವ್ಯಾಕ್ಸಿನ್ ಲಸಿಕೆಯನ್ನು ICMR ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿತ್ತು.

ಐಸಿಎಮ್ಆರ್ನಿಂದ ಪೂರ್ವಾನುಮತಿ ಪಡೆಯದೆ ಅಥವಾ ಅದರ ಬಗ್ಗೆ ಸಂಸ್ಥೆಗೆ ಯಾವುದೇ ಮಾಹಿತಿ ನೀಡದೆ, ಅಧ್ಯಯನಕ್ಕೆ ICMR ಅನುಮೋದನೆ ನೀಡಿದೆ ಎಂಬುದಾಗಿ ಅಧ್ಯಯನದಲ್ಲಿ ಬರೆಯಲಾಗಿದೆ ಎಂದು ICMR ಮುಖ್ಯಸ್ಥರು ಹೇಳಿದ್ದಾರೆ.

ಅಧ್ಯಯನದಲ್ಲಿ ಉಲ್ಲೇಖಿಸಲಾದ ‘ಆ್ಯಡ್ವರ್ಸ್ ಈವಂಟ್ಸ್ ಆಫ್ ಸ್ಪೆಶಲ್ ಇಂಟರೆಸ್ಟ್ (ಎಇಎಸ್ಐ)’ ಮಾನದಂಡಗಳೊಂದಿಗೆ ಅಧ್ಯಯನದಲ್ಲಿ ಬಳಸಲಾಗಿರುವ ಸಲಕರಣೆಯು ಹೊಂದಿಕೆಯಾಗುವುದಿಲ್ಲ ಎಂದು ರಾಜೀವ್ ಬಹಲ್ ತಿಳಿಸಿದ್ದಾರೆ. ಲಸಿಕಾ ಕಾರ್ಯಕ್ರಮ ಮುಗಿದ ಒಂದು ವರ್ಷದ ಬಳಿಕ, ಅಧ್ಯಯನಕ್ಕಾಗಿ ಅಂಕಿಅಂಶಗಳನ್ನು ಟೆಲಿಫೋನ್ ಮೂಲಕ ಸಂಗ್ರಹಿಸಲಾಗಿದೆ ಹಾಗೂ ಇದನ್ನು ವೈದ್ಯಕೀಯ ದಾಖಲೆಗಳು ಅಥವಾ ವೈದ್ಯಕೀಯ ಪರೀಕ್ಷೆಗಳ ಮೂಲಕ ಪರಿಶೀಲನೆಗೆ ಒಳಪಡಿಸಲಾಗಿಲ್ಲ. ಹಾಗಾಗಿ, ಇಲ್ಲಿ ಗಣನೀಯ ಲೋಪವಾಗಿದೆ’’ ಎಂದು ಅವರು ತನ್ನ ಪತ್ರದಲ್ಲಿ ಹೇಳಿದ್ದಾರೆ.

ಸಂಶೋಧನೆಗೆ ICMR ಯಾವುದೇ ಹಣಕಾಸು ಅಥವಾ ತಾಂತ್ರಿಕ ಬೆಂಬಲವನ್ನು ನೀಡಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News