ಮಣಿಪುರ ಹೊತ್ತಿ ಉರಿಯುತ್ತಿರುವಾಗ ಹಾಸ್ಯ ಚಟಾಕಿ ಹಾರಿಸುವುದು ಪ್ರಧಾನಿ ಹುದ್ದೆಗೆ ತಕ್ಕುದಲ್ಲ: ಪ್ರಧಾನಿಯ ಲೋಕಸಭೆ ಭಾಷಣದ ಬಗ್ಗೆ ರಾಹುಲ್ ಗಾಂಧಿ
ಹೊಸದಿಲ್ಲಿ: “ಪ್ರಧಾನಿ ನರೇಂದ್ರ ಮೋದಿಗೆ ಮಣಿಪುರದ ಬೆಂಕಿ ಆರಿಸಲು ಮನಸ್ಸಿಲ್ಲ ಮತ್ತು ಇದು ಮಣಿಪುರದ ಸತ್ಯ,” ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶುಕ್ರವಾರ ಮಾದ್ಯಮ ಗೋಷ್ಠಿಯಲ್ಲಿ ಹೇಳಿದರು. ಪ್ರಧಾನಿ ಮೋದಿ ಸಂಸತ್ತಿನಲ್ಲಿ ವಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಉತ್ತರಿಸಿದ ಮರುದಿನ ರಾಹುಲ್ ಅವರ ಹೇಳಿಕೆ ಬಂದಿದೆ.
“ಪ್ರಧಾನಿ ಸಂಸತ್ತಿನಲ್ಲಿ ಮಾತನಾಡುವುದನ್ನು ಕೇಳಿದೆ. ಅವರು ಹಾಸ್ಯ ಚಟಾಕಿ ಹಾರಿಸುತ್ತಿದ್ದರು, ನಗುತ್ತಿದ್ದರು ಹಾಗೂ ಎನ್‌ಡಿಎ ಸಂಸದರು ಘೋಷಣೆ ಕೂಗುತ್ತಿದ್ದರು. ಅವರು ಪ್ರಧಾನಿಯ ರೀತಿ ವರ್ತಿಸಿಲ್ಲ,” ಎಂದು ರಾಹುಲ್ ಹೇಳಿದರು.
“ನಾನು ಕಳೆದ 19 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ, ಎಲ್ಲಾ ರಾಜ್ಯಗಳಿಗೆ ಹೋಗಿದ್ದೇನೆ. ಆದರೆ ಮಣಿಪುರದಲ್ಲಿ ನಡೆದಿರುವಂತಹುದ್ದು ಎಲ್ಲಿಯೂ ನೋಡಿಲ್ಲ. ಪ್ರಾಯಶಃ ನಾನು ಈಗ ಹೇಳಬೇಕಿದೆ. ನಾನು ಮೈತೈ ಪ್ರದೇಶಕ್ಕೆ ಹೋದಾಗ, ನಮ್ಮ ಭದ್ರತೆಗಾಗಿ ಯಾರಾದರೂ ಕುಕಿಯನ್ನು ಕರೆದುಕೊಂಡು ಹೋಗುವಂತೆ ಹೇಳಲಾಯಿತು. ಕುಕಿ ಪ್ರದೇಶದಲ್ಲೂ ಇದೇ ಪರಿಸ್ಥಿತಿ. ಮಣಿಪುರವನ್ನು ಕುಕಿ ಮತ್ತು ಮೈತೈ ನಡುವೆ ವಿಭಜಿಸಲಾಗಿದೆ. ಮಣಿಪುರ ಒಂದು ರಾಜ್ಯವಾಗಿ ಉಳಿದಿಲ್ಲ. ಇದನ್ನೇ ನಾನು ಸಂಸತ್ತಿನಲ್ಲಿ ಹೇಳಿದ್ದೆ,” ಎಂದು ರಾಹುಲ್ ಹೇಳಿದರು.
“ಮಣಿಪುರದ ಪರಿಸ್ಥಿತಿ ನಿಯಂತ್ರಿಸಲು ಪ್ರಧಾನಿ ಮೋದಿ ಬಳಿ ಹಲವು ಸಾಧನಗಳಿವೆ ಆದರೆ ಅವರು ಮಾಡುತ್ತಿಲ್ಲ, ಬದಲಿಗೆ ಅವರು ಸಂಸತ್ತಿನಲ್ಲಿ ನಗುತ್ತಾರೆ,ಅವರಿಗೆ ಮಣಿಪುರಕ್ಕೆ ಹೋಗಿ ಅಲ್ಲಿನ ಸಮುದಾಯಗಳ ಜೊತೆ ಮಾತನಾಡಬಹುದಾಗಿತ್ತು,” ಎಂದು ರಾಹುಲ್ ಹೇಳಿದರು.
“ಒಬ್ಬ ವ್ಯಕ್ತಿ ಪ್ರಧಾನಿಯಾದಾಗ ಸಣ್ಣ ರಾಜಕಾರಣಿಯಂತೆ ಮಾತನಾಡಕೂಡದು. ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷ, ವಿಪಕ್ಷಗಳ ಬಗ್ಗೆ ಎರಡು ಗಂಟೆ ಮಾತನಾಡಿದ್ದು ನೋಡಿದಾಗ ಬೇಸರವಾಗುತ್ತದೆ. ಅವರ ಹುದ್ದೆಗೆ ಇದು ತಕ್ಕುದಲ್ಲ, ಪ್ರಧಾನಿಯ ಕೈಯ್ಯಲ್ಲಿ ಬೇಕಾದ ಸಾಧನಗಳಿವೆ, ಆದರೆ ಅವರು ಅದನ್ನು ಬಳಸುತ್ತಿಲ್ಲ, ಪ್ರಧಾನಿ ಮಣಿಪುರಕ್ಕೆ ಏಕೆ ಹೋಗುತ್ತಿಲ್ಲ ಎಂಬುದಕ್ಕೆ ಸ್ಪಷ್ಟ ಕಾರಣಗಳಿವೆ,” ಎಂದು ರಾಹುಲ್ ಹೇಳಿದರು.
“ನಾನು ಸೇನೆಯ ಹಸ್ತಕ್ಷೇಪ ಕೋರುವುದಿಲ್ಲ, ಆದರೆ ಈ ಸಮಸ್ಯೆಯನ್ನು ಸೇನೆ ಎರಡು ದಿನಗಳಲ್ಲಿ ನಿಲ್ಲಿಸಬಹುದು. ಪ್ರಧಾನಿ ಯಾವ ಸಾಧನ ಬಳಸಬೇಕೆಂದು ಹೇಳುವುದು ನನ್ನ ಕೆಲಸವಲ್ಲ,” ಎಂದು ರಾಹುಲ್ ಹೇಳಿದರು.