ಕ್ರಿಮಿನಲ್ ಮಾನನಷ್ಟ ಪ್ರಕರಣ ; ಕುಸ್ತಿಪಟು ಬಜರಂಗ್ ಪುನಿಯಾಗೆ ಜಾಮೀನು

Update: 2023-11-09 15:46 GMT

ಬಜರಂಗ್ ಪುನಿಯಾ | Photo: PTI

ಹೊಸದಿಲ್ಲಿ: ತರಬೇತುದಾರ ನರೇಶ್ ದಹಿಯಾ ಅವರು ದಾಖಲಿಸಿದ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಕುಸ್ತಿಪಟು ಬಜರಂಗ್ ಪುನಿಯಾಗೆ ದಿಲ್ಲಿ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ.

ಕುಸ್ತಿ ಫೆಡರೇಶನ್‌ನ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭ ಬಜರಂಗ್ ಪುನಿಯಾ ನೀಡಿದ ಹೇಳಿಕೆ ತನ್ನ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿದೆ ಎಂದು ನರೇಶ್ ದಹಿಯಾ ಆರೋಪಿಸಿದ್ದಾರೆ.

ಕುಸ್ತಿಪಟುಗಳ ಪ್ರತಿಭಟನೆಯ ಸಂದರ್ಭ ಬಜರಂಗ್ ಪುನಿಯಾ ಅವರು, ನರೇಶ್ ದಹಿಯಾ ಸ್ವತಃ ಅತ್ಯಾಚಾರ ಪ್ರಕರಣವನ್ನು ಎದುರಿಸುತ್ತಿರುವುದರಿಂದ ಪ್ರತಿಭಟನೆಯನ್ನು ವಿರೋಧಿಸುವ ಅರ್ಹತೆ ಅವರಿಗಿಲ್ಲ ಎಂದಿದ್ದರು. ಈ ಕಾರಣಕ್ಕಾಗಿ ನರೇಶ್ ದಹಿಯಾ ಅವರು ಬಜರಂಗ್ ಪುನಿಯಾ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯ ಬಜರಂಗ್ ಪುನಿಯಾಗೆ ಸಮನ್ಸ್ ಜಾರಿಗೊಳಿಸಿತ್ತು.

‘‘ಹಾಜರಾತಿಯಿಂದ ವಿನಾಯತಿ ನೀಡುವಂತೆ ಭಜರಂಗ್ ಪುನಿಯಾ ಅವರು ಕೋರಿದ್ದರು ಹಾಗೂ ಅವರು ಮೊದಲ ಮೂರು ವಿಚಾರಣೆಗೆ ಗೈರಾಗಿದ್ದರು ಅವರು ಇಂದು ಹಾಜರಾಗಿದ್ದು, ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 5ರಂದು ನಡೆಯಲಿದೆ’’ ಎಂದು ನರೇಶ್ ದಹಿಯಾ ಪರ ನ್ಯಾಯವಾದಿ ರಾಜೇಶ್ ಕುಮಾರ್ ರೆಕ್ಸ್‌ವಾಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News