ನಾಳೆಯಿಂದ ಬ್ರಿಟಿಷ್ ಯುಗದ ಕಾನೂನುಗಳಿಗೆ ತೆರೆ | ಮೂರು ನೂತನ ಕ್ರಿಮಿನಲ್ ಕಾಯ್ದೆಗಳು ಜಾರಿ

Update: 2024-06-30 14:26 GMT

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ : ಸೋಮವಾರ, ಜುಲೈ 1ರಂದು ಮೂರು ನೂತನ ಕ್ರಿಮಿನಲ್ ಕಾನೂನುಗಳು ದೇಶಾದ್ಯಂತ ಜಾರಿಗೊಳ್ಳಲಿದ್ದು ಬ್ರಿಟಿಷ್ ಯುಗದ ಕಾನೂನುಗಳು ಅಸ್ವಿತ್ವ ಕಳೆದುಕೊಳ್ಳಲಿವೆ. ಭಾರತೀಯ ನ್ಯಾಯ ಸಂಹಿತಾ,ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಇವು ಅನುಕ್ರಮವಾಗಿ ಬ್ರಿಟಿಷ್ ಯುಗದ ಭಾರತೀಯ ದಂಡ ಸಂಹಿತೆ (ಐಪಿಸಿ),ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು ಬದಲಿಸಲಿದ್ದು, ಭಾರತದ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆಗಳನ್ನು ತರಲಿವೆ.

ಶೂನ್ಯ ಎಫ್ಐಆರ್, ಪೊಲೀಸ್‌ ದೂರುಗಳ ಆನ್ಲೈನ್ ನೋಂದಣಿ, ವಿದ್ಯುನ್ಮಾನ ಸಮನ್ಸ್ ಗಳು ಮತ್ತು ಎಲ್ಲ ಘೋರ ಅಪರಾಧ ಪ್ರಕರಣಗಳಲ್ಲಿ ಅಪರಾಧ ಸ್ಥಳಗಳ ಕಡ್ಡಾಯ ವೀಡಿಯೊ ಚಿತ್ರೀಕರಣದಂತಹ ನಿಬಂಧನೆಗಳೊಂದಿಗೆ ನ್ಯಾಯ ವ್ಯವಸ್ಥೆಯನ್ನು ಆಧುನೀಕರಿಸುವ ಗುರಿಯನ್ನು ಈ ಸುಧಾರಣೆಗಳು ಹೊಂದಿವೆ.

ನೂತನ ಶಾಸನಗಳು ಪ್ರಸ್ತುತ ಸಾಮಾಜಿಕ ಸಂದರ್ಭಗಳು ಮತ್ತು ಅಪರಾಧಗಳನ್ನು ನಿಭಾಯಿಸುತ್ತವೆ ಹಾಗೂ ಸಂವಿಧಾನದಲ್ಲಿ ಎತ್ತಿ ಹಿಡಿಯಲಾಗಿರುವ ತತ್ವಗಳಿಗೆ ಅನುಗುಣವಾಗಿವೆ ಎಂದು ಹೇಳಲಾಗಿದೆ.

ನೂತನ ಕಾನೂನುಗಳನ್ನು ಮಂಡಿಸಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು,ಇವು ದಂಡನಾ ಕ್ರಮಕ್ಕಿಂತ ನ್ಯಾಯಕ್ಕೆ ಆದ್ಯತೆ ನೀಡುವ ಮೂಲಕ ವಸಾಹತುಶಾಹಿ ಯುಗದ ಕ್ರಿಮಿನಲ್ ನ್ಯಾಯ ಕಾನೂನುಗಳಿಂದ ನಿರ್ಗಮನವನ್ನು ಸೂಚಿಸುತ್ತದೆ ಎಂದು ಒತ್ತಿ ಹೇಳಿದ್ದರು.

► ಕ್ರಿಮಿನಲ್ ಕಾನೂನಗಳು | ಬದಲಾವಣೆಗಳೇನು?

ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣೆ ಪೂರ್ಣಗೊಂಡ 45 ದಿನಗಳಲ್ಲಿ ಕಡ್ಡಾಯ ತೀರ್ಪು ಪ್ರಕಟಣೆ ಮತ್ತು ಮೊದಲ ವಿಚಾರಣೆಯ 60 ದಿನಗಳಲ್ಲಿ ಆರೋಪಗಳನ್ನು ರೂಪಿಸುವುದು ಪ್ರಮುಖ ಬದಲಾವಣೆಗಳಲ್ಲಿ ಸೇರಿವೆ.

ನೂತನ ಕಾನೂನುಗಳು ಸಂಘಟಿತ ಅಪರಾಧಗಳು ಮತ್ತು ಭಯೋತ್ಪಾದನೆಯನ್ನು ವ್ಯಾಖ್ಯಾನಿಸುತ್ತವೆ. ಎಲ್ಲ ಶೋಧ ಮತ್ತು ಜಪ್ತಿ ಕಾರ್ಯಾಚರಣೆಗಳ ವೀಡಿಯೊ ಚಿತ್ರೀಕರಣವನ್ನು ಕಡ್ಡಾಯಗೊಳಿಸಲಾಗಿದೆ.

ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ನೂತನ ಅಧ್ಯಾಯವು ಮಕ್ಕಳ ಖರೀದಿ ಮತ್ತು ಮಾರಾಟವನ್ನು ಘೋರ ಅಪರಾಧವನ್ನಾಗಿಸಿದೆ. ಅಪ್ರಾಪ್ತ ವಯಸ್ಕರ ಸಾಮೂಹಿಕ ಅತ್ಯಾಚಾರಕ್ಕಾಗಿ ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗುವುದು.

ಭಾರತೀಯ ನ್ಯಾಯ ಸಂಹಿತಾ ಐಪಿಸಿಯ ವ್ಯಾಪ್ತಿಯಲ್ಲಿ ಸ್ಪಷ್ಟವಾಗಿರದಿದ್ದ ಸುಳ್ಳು ಮದುವೆ ಭರವಸೆಗಳು,ಅಪ್ರಾಪ್ತ ವಯಸ್ಕರ ಸಾಮೂಹಿಕ ಅತ್ಯಾಚಾರ,ಗುಂಪಿನಿಂದ ಹತ್ಯೆ ಮತ್ತು ಸರಗಳ್ಳತನಗಳಂತಹ ಅಪರಾಧಗಳನ್ನು ನಿರ್ವಹಿಸುತ್ತದೆ.

ಹೊಸ ಕಾನೂನುಗಳಡಿ ವ್ಯಕ್ತಿಗಳು ಘಟನೆಗಳನ್ನು ವಿದ್ಯುನ್ಮಾನ ರೂಪದಲ್ಲಿ ವರದಿ ಮಾಡಬಹುದು. ಶೂನ್ಯ ಎಫ್ಐಆರ್ ನ್ಯಾಯವ್ಯಾಪ್ತಿಯನ್ನು ಪರಿಗಣಿಸದೆ ಯಾವುದೇ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲು ಅವಕಾಶ ಕಲ್ಪಿಸುತ್ತದೆ ಮತ್ತು ತಕ್ಷಣದ ಕ್ರಮವನ್ನು ಖಚಿತಪಡಿಸುತ್ತದೆ. ಬಂಧಿತ ವ್ಯಕ್ತಿಗಳು ತಮ್ಮ ಆಯ್ಕೆಯ ವ್ಯಕ್ತಿಗೆ ಮಾಹಿತಿ ನೀಡುವ ಹಕ್ಕು ಹೊಂದಿರುತ್ತಾರೆ ಮತ್ತು ಬಂಧನದ ವಿವರಗಳನ್ನು ಪೊಲೀಸ್‌ ಠಾಣೆಗಳಲ್ಲಿ ಮತ್ತು ಜಿಲ್ಲಾ ಕೇಂದ್ರ ಕಚೇರಿಗಳಲ್ಲಿ ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ.

ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಸಂತ್ರಸ್ತರು 90 ದಿನಗಳಲ್ಲಿ ನಿಯಮಿತವಾಗಿ ಪ್ರಕರಣದ ಕುರಿತು ಇತ್ತೀಚಿನ ಮಾಹಿತಿಗಳನ್ನು ಪಡೆಯುವ ಹಕ್ಕು ಹೊಂದಿರುತ್ತಾರೆ. ಇದು ಕಾನೂನು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಅವರ ಒಳಗೊಳ್ಳುವಿಕೆಯನ್ನು ಖಚಿತಪಡಿಸುತ್ತದೆ. ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಅಪರಾಧ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಆಸ್ಪತ್ರೆಗಳು ಉಚಿತ ಪ್ರಥಮ ಚಿಕಿತ್ಸೆ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಬೇಕು.

ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳು,ಕೊಲೆ ಮತ್ತು ಸರಕಾರದ ವಿರುದ್ಧ ಅಪರಾಧಗಳಿಗೆ ನೂತನ ಕಾಯ್ದೆಗಳಡಿ ಆದ್ಯತೆಯನ್ನು ನೀಡಲಾಗಿದೆ. ಒಂದೇ ರೀತಿಯ ಕಲಮ್ ಗಳನ್ನು ವಿಲೀನಗೊಳಿಸಲಾಗಿದ್ದು ಸರಳಗೊಳಿಸಲಾಗಿದೆ. ಐಪಿಸಿಯಲ್ಲಿನ 511 ರಷ್ಟಿದ್ದ ಕಲಮ್ ಗಳ ಸಂಖ್ಯೆಯನ್ನು 358ಕ್ಕೆ ತಗ್ಗಿಸಲಾಗಿದೆ.

ಅತ್ಯಾಚಾರ ಸಂತ್ರಸ್ತೆಯರ ಹೇಳಿಕೆಗಳನ್ನು ಈಗ ಮಹಿಳಾ ಪೊಲೀಸ್‌ ಅಧಿಕಾರಿಗಳು ಪೋಷಕರು ಅಥವಾ ಸಂಬಂಧಿಯ ಉಪಸ್ಥಿತಿಯಲ್ಲಿ ದಾಖಲಿಸಿಕೊಳ್ಳುತ್ತಾರೆ. ಏಳು ದಿನಗಳಲ್ಲಿ ವೈದ್ಯಕೀಯ ವರದಿ ನೀಡುವುದು ಅಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News