ತಮಿಳುನಾಡು| ಗ್ರಾ.ಪಂ. ದಲಿತ ಅಧ್ಯಕ್ಷೆಗೆ ಜಾತಿ ನಿಂದನೆ, ಕರ್ತವ್ಯಕ್ಕೆ ಅಡ್ಡಿ: ಆರೋಪ

Update: 2024-08-25 10:42 GMT

   ಸಾಂದರ್ಭಿಕ ಚಿತ್ರ 

ವಿಲ್ಲುಪುರಂ: ತಿಂಡಿವನಂ ತಾಲೂಕಿನ ಅವ್ವೈಯಾರಕುಪ್ಪಂ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಕೆ.ಮಹಾಲಕ್ಷ್ಮಿ ಅವರು ಉಪಾಧ್ಯಕ್ಷ ವೀರಮಣಿ ತನ್ನ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ ಮತ್ತು ಅವಾಚ್ಯ ಶಬ್ದಗಳೊಂದಿಗೆ ತನ್ನ ಜಾತಿನಿಂದನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿರುವ ವೀರಮಣಿ ತಾನು ಅಧಿಕಾರ ಸ್ವೀಕರಿಸಿದಾಗಿನಿಂದಲೂ ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ,ಕಚೇರಿಯಲ್ಲಿ ತನಗಾಗಿ ನಿಗದಿಯಾಗಿರುವ ಕುರ್ಚಿಯಲ್ಲಿ ಕುಳಿತುಕೊಳ್ಳಲೂ ಬಿಡುತ್ತಿಲ್ಲ ಎಂದು ಮಹಾಲಕ್ಷ್ಮಿ ಜಿಲ್ಲಾಧಿಕಾರಿ ಸಿ.ಪಳನಿ ಅವರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

‘ಇತ್ತೀಚಿಗೆ ನಮ್ಮ ಗ್ರಾಮದಲ್ಲಿ 8.2ಲಕ್ಷ ರೂ.ವೆಚ್ಚದಲ್ಲಿ ಕುಡಿಯುವ ನೀರಿನ ಎರಡು ಮೂಲಸೌಕರ್ಯ ಕಾಮಗಾರಿಗಳನ್ನುಕೈಗೊಳ್ಳಲು ನಾವು ಯೋಜಿಸಿದ್ದೆವು. ನೀರಿನ ಟ್ಯಾಂಕಿನ ಕಾಮಗಾರಿ ಬಹುತೇಕ ಮುಗಿದಿದೆ. ಯೋಜನೆಯನ್ನು ಪೂರ್ಣಗೊಳಿಸಲು ಉಳಿದ ಹಣದ ಮಂಜೂರಾತಿಗಾಗಿ ನಾನು ನನ್ನ ಡಿಜಿಟಲ್ ಕೀ (ಸರಕಾರದಿಂದ ಹಣ ಪಡೆಯಲು ಒಂದು ರೀತಿಯ ಪಾಸ್‌ವರ್ಡ್) ಅನ್ನು ಸರಕಾರದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದೇನೆ,ಆದರೆ ತನ್ನ ಡಿಜಿಟಲ್ ಕೀ ಅನ್ನು ಅಪ್‌ಲೋಡ್ ಮಾಡಲು ವೀರಮಣಿ ನಿರಾಕರಿಸಿದ್ದಾರೆ. ಈ ಬಗ್ಗೆ ನಾನು ಪ್ರಶ್ನಿಸಿದಾಗ ಜಾತಿ ನಿಂದನೆ ಮಾಡಿದ್ದಾರೆ ಮತ್ತು ನನಗೆ ಉತ್ತರ ನೀಡುವ ಹೊಣೆಗಾರಿಕೆ ತನಗಿಲ್ಲ ’ಎಂದು ಹೇಳಿದ್ದಾರೆ ಎಂದು ಮಹಾಲಕ್ಷ್ಮಿ ದೂರಿನಲ್ಲಿ ಆರೋಪಿಸಿದ್ದಾರೆ.

ವಿಲ್ಲುಪುರಂ ಸಂಸದ ಡಿ.ರವಿಕುಮಾರ ಅವರು ಬುಧವಾರ ಮಹಾಲಕ್ಷ್ಮಿಯವರನ್ನು ಭೇಟಿಯಾಗಿ ಸರಕಾರದಿಂದ ತ್ವರಿತ ಕ್ರಮದ ಭರವಸೆ ನೀಡಿದ್ದಾರೆ.

ದೂರು ಸ್ವೀಕಾರದ ಬಳಿಕ ವಿಚಾರಣೆಯನ್ನು ಆರಂಭಿಸಲಾಗಿದೆ. ವೀರಮಣಿ ಆಕ್ಷೇಪವನ್ನು ಸಲಿಸಿದ್ದಾರೆ ಮತ್ತು ಪರಿಶೀಲನೆಗಾಗಿ ಕೆಲವು ದಾಖಲೆಗಳನ್ನು ಕೋರಿದ್ದರು. ಅವುಗಳನ್ನು ಅವರಿಗೆ ಒದಗಿಸಲಾಗಿದೆ. ಆದರೆ ಅವರು ತನ್ನ ಡಿಜಿಟಲ್ ಕೀ ಅನ್ನು ಅಪ್‌ಲೋಡ್ ಮಾಡುತ್ತಿಲ್ಲ ಎಂದು ಪಳನಿ ಸುದ್ದಿಸಂಸ್ಥೆಗೆ ತಿಳಿಸಿದರು.

ಬುಧವಾರ ಮೈಲಂ ಬಿಡಿಒ ವೀರಮಣಿಗೆ ಎರಡು ದಿನಗಳ ಅಂತಿಮ ಗಡುವು ನೀಡಿದ್ದರು. ಡಿಜಿಟಲ್ ಕೀ ಅಪ್‌ಲೋಡ್ ಮಾಡಲು ವಿಫಲಗೊಂಡರೆ ಅವರ ಹಣಕಾಸು ಅಧಿಕಾರವನ್ನು ಹಿಂದೆಗೆದುಕೊಂಡು ಬಿಡಿಒಗೆ ವರ್ಗಾಯಿಸಲಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಲಾಗಿತ್ತು. ಅದನ್ನೂ ವೀರಮಣಿ ಲೆಕ್ಕಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News