ಜೈಲಿನಿಂದ ಬಿಡುಗಡೆ ಕೋರಿ ದಾರಾ ಸಿಂಗ್ ಅರ್ಜಿ | ಸುಪ್ರೀಂ ಕೋರ್ಟ್‌ನಿಂದ ಒಡಿಶಾ ಸರಕಾರಕ್ಕೆ ನೋಟಿಸ್
ಹೊಸದಿಲ್ಲಿ : 1999ರಲ್ಲಿ ಆಸ್ಟ್ರೇಲಿಯದ ಧರ್ಮ ಪ್ರಚಾರಕ ಗ್ರಹಾಮ್ ಸ್ಟುವರ್ಟ್ ಸ್ಟೇನ್ಸ್ ಮತ್ತು ಅವರ ಇಬ್ಬರು ಅಪ್ರಾಪ್ತ ಪುತ್ರರನ್ನು ಹತ್ಯೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ತನಗೆ ಜೈಲಿನಿಂದ ಬಿಡುಗಡೆನೀಡಬೇಕು ಎಂದು ಕೋರಿ ಪ್ರಕರಣದ ಪ್ರಮುಖ ಆರೋಪಿ ರವೀಂದ್ರ ಪಾಲ್ ಯಾನೆ ದಾರಾ ಸಿಂಗ್ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ಸುಪ್ರೀಂ ಕೋರ್ಟ್ ಮಂಗಳವಾರ ಒಡಿಶಾ ಸರಕಾರಕ್ಕೆ ನೋಟಿಸ್ ನೀಡಿದೆ.
ಆರೋಪಿಯ ಮನವಿಗೆ ಪ್ರತಿಕ್ರಿಯಿಸಲು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್.ವಿ.ಎನ್. ಭಟ್ಟಿ ಅವರನ್ನೊಳಗೊಂಡ ನ್ಯಾಯಪೀಠವೊಂದು ಒಡಿಶಾ ಸರಕಾರಕ್ಕೆ ಆರು ವಾರಗಳ ಸಮಯಾವಕಾಶ ನೀಡಿದೆ.
1999 ಜನವರಿ 22ರ ರಾತ್ರಿ, ಸಿಂಗ್ ನೇತೃತ್ವದ ಗುಂಪೊಂದು ಒಡಿಶಾದ ಕಿಯೋಂಜರ್ ಜಿಲ್ಲೆಯ ಮನೋಹರ್‌ಪುರ್ ಗ್ರಾಮದಲ್ಲಿ ಕಾರೊಂದರಲ್ಲಿ ಮಲಗಿದ್ದ ಸ್ಟೇನ್ಸ್ ಮತ್ತು ಅವರ ಇಬ್ಬರು ಪುತ್ರರನ್ನು ಜೀವಂತ ಸುಟ್ಟು ಹಾಕಿತ್ತು.
ಗ್ರಹಾಂ ಸ್ಟೇನ್ಸ್ ಆದಿವಾಸಿಗಳನ್ನು ಮತಾಂತರ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ, ಸಿಂಗ್ ಜನರನ್ನು ಅವರ ವಿರುದ್ಧ ಎತ್ತಿಕಟ್ಟಿದ್ದನು ಎಂದು ಆರೋಪಿಸಲಾಗಿದೆ. 2003ರಲ್ಲಿ ವಿಚಾರಣಾ ನ್ಯಾಯಾಲಯವು ಅವನಿಗೆ ಮರಣ ದಂಡನೆ ವಿಧಿಸಿತ್ತು. 2005ರಲ್ಲಿ, ಒಡಿಶಾ ಹೈಕೋರ್ಟ್ ಅವನ ಶಿಕ್ಷೆಯನ್ನು ಜೀವಾವಧಿ ಜೈಲುವಾಸಕ್ಕೆ ಇಳಿಸಿತು ಮತ್ತು ಇತರ 11 ಆರೋಪಿಗಳನ್ನು ದೋಷಮುಕ್ತಗೊಳಿಸಿತು. 2011ರಲ್ಲಿ, ಸುಪ್ರೀಂ ಕೋರ್ಟ್ ಹೈಕೋರ್ಟ್‌ನ ತೀರ್ಪನ್ನು ಎತ್ತಿಹಿಡಿಯಿತು.
ನಾನು 24 ವರ್ಷಗಳಿಗೂ ಅಧಿಕ ಅವಧಿಯನ್ನು ಜೈಲಿನಲ್ಲಿ ಕಳೆದಿದ್ದೇನೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ 61 ವರ್ಷದ ದಾರಾ ಸಿಂಗ್ ಹೇಳಿದ್ದಾನೆ. ನಾನು ಯಾವತ್ತೂ ಪರೋಲ್‌ನಲ್ಲಿ ಬಿಡುಗಡೆಗೊಂಡಿಲ್ಲ ಮತ್ತು ನನ್ನ ತಾಯಿ ನಿಧನರಾದಾಗ ಅವರ ಅಂತ್ಯಸಂಸ್ಕಾರ ಮಾಡಲೂ ಸಾಧ್ಯವಾಗಲಿಲ್ಲ ಎಂದು ಅವನು ಹೇಳಿದ್ದಾನೆ.
ಗ್ರಹಾಂ ಸ್ಟೇನ್ಸ್ ಮತ್ತು ಅವರ ಪುತ್ರರ ಕೊಲೆಯಲ್ಲದೆ, ಮುಸ್ಲಿಮ್ ವ್ಯಾಪಾರಿಯೊಬ್ಬರನ್ನು ಹತ್ಯೆಗೈದ ಆರೋಪವನ್ನೂ ದಾರಾ ಸಿಂಗ್ ಎದುರಿಸುತ್ತಿದ್ದಾನೆ.