ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಪುತ್ರಿಯ ʼಮರ್ಯಾದೆ ಹತ್ಯೆʼ; ದಂಪತಿಯ ಬಂಧನ

Update: 2024-01-11 15:26 GMT

ತಂಜಾವೂರು: ದಲಿತ ಯುವಕನನ್ನು ವಿವಾಹವಾಗಿರುವುದಕ್ಕೆ ತಮ್ಮ 19 ವರ್ಷದ ಪುತ್ರಿಯನ್ನು ಹತ್ಯೆಗೈದ ಆರೋಪದಲ್ಲಿ ದಂಪತಿಯನ್ನು ತಂಜಾವೂರು ಜಿಲ್ಲೆಯಿಂದ ವಟ್ಟತಿಕೋಟೈ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಪಿ. ಪೆರುಮಾಳ್ (50) ಹಾಗೂ ರೋಜಾ (45) ಎಂದು ಗುರುತಿಸಲಾಗಿದೆ. ಅವರನ್ನು ಪಟ್ಟುಕೋಟೈ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರಿಗೆ 15 ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ.

ನೆರೆಯ ಗ್ರಾಮವಾದ ಪೂವಲೂರಿನ ದಲಿತ ಸಮುದಾಯಕ್ಕೆ ಸೇರಿದ ಬಿ. ನವೀನ್ ಅವರನ್ನು ವಿವಾಹವಾಗಿದ್ದ ತಮ್ಮ ಪುತ್ರಿ ಐಶ್ವರ್ಯಾಳನ್ನು ಪೆರುಮಾಳ್ ಜನವರಿ 2ರಂದು ರಾತ್ರಿ ತಿರುಪುರದಿಂದ ಹಿಂದೆ ಕರೆದುಕೊಂಡು ಬಂದಿದ್ದರು ಹಾಗೂ ಆತನನ್ನು ವಿವಾಹವಾಗಿರುವುದಕ್ಕೆ ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡಿದ್ದ ಐಶ್ವರ್ಯಾ ಜನವರಿ 3ರಂದು ಮುಂಜಾನೆ ಮೃತಪಟ್ಟಿದ್ದಳು.

ಈ ಹತ್ಯೆಯನ್ನು ಮುಚ್ಚಿ ಹಾಕಲು ಪೆರುಮಾಳ್ ಆಕೆಯ ಮೃತದೇಹವನ್ನು ಸೀಲಿಂಗ್ ಗೆ ನೇತು ಹಾಕಿ ಆತ್ಮಹತ್ಯೆಯೆಂದು ಬಿಂಬಿಸಿದ್ದ. ಸಾಕ್ಷ್ಯಗಳನ್ನು ನಾಶಪಡಿಸುವ ಪ್ರಯತ್ನವಾಗಿ ಪೆರುಮಾಳ್ ಹಾಗೂ ಆತನ ಸಂಬಂಧಿಕರು ಐಶ್ವರ್ಯಾಳ ಮೃತದೇಹವನ್ನು ಗ್ರಾಮದಲ್ಲಿರುವ ಚಿತಾಗಾರಕ್ಕೆ ಕೊಂಡೊಯ್ದು ಅಂತ್ಯ ಕ್ರಿಯೆ ನಡೆಸಿದ್ದರು. ಪೆರುಮಾಳ್ ಸ್ಪಲ್ಪ ಸಮಯದ ಬಳಿಕ ಚಿತಾಗಾರಕ್ಕೆ ತೆರಳಿ ಎಲುಬುಗಳನ್ನು ಸಂಗ್ರಹಿಸಿ ದೂರ ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತಿರುಪುರದ ಹೊಸೈರಿ ಘಟಕದ ಉದ್ಯೋಗಿಯಾಗಿದ್ದ ಐಶ್ವರ್ಯಾ ಡಿಸೆಂಬರ್ 31ರಂದು ನವೀನ್ ನ್ನು ವಿವಾಹವಾಗಿದ್ದಳು. ಈ ವಿವಾಹವನ್ನು ವಿರೋಧಿಸಿದ್ದ ಪೆರುಮಾಳ್ ಹಾಗೂ ಆತನ ಸಂಬಂಧಿಕರು ಐಶ್ವರ್ಯಾ ನಾಪತ್ತೆಯಾಗಿದ್ದಾಳೆ ಎಂದು ಜನವರಿ 2ರಂದು ದೂರು ಸಲ್ಲಿಸಿದ್ದರು. ಅನಂತರ ಐಶ್ವರ್ಯಾಳನ್ನು ಗ್ರಾಮಕ್ಕೆ ಹಿಂದೆ ಕರೆ ತರಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಆಕೆಯನ್ನು ಜನವರಿ 3ರಂದು ಹತ್ಯೆಗೈಯಲಾಗಿದೆ. ಜನವರಿ 7ರಂದು ನವೀನ್ ಸಲ್ಲಿಸಿದ ದೂರಿನ ಆಧಾರದಲ್ಲಿ ಹತ್ಯೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News