ಮಾನನಷ್ಟ ಮೊಕದ್ದಮೆ: ಕೋರ್ಟ್ ಹಾಜರಾತಿಯಿಂದ ಬಜರಂಗ್ ಪುನಿಯಾಗೆ ವಿನಾಯಿತಿ

Defamation case: Bajrang Punia exempted from court appearance

Update: 2023-09-14 17:46 GMT

ಬಜರಂಗ್ ಪುನಿಯಾ | Photo: PTI 

ಹೊಸದಿಲ್ಲಿ: ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಗೆ ವೈಯಕ್ತಿಕವಾಗಿ ಹಾಜರಾಗುವುದರಿಂದ ಕುಸ್ತಿಪಟು ಬಜರಂಗ್ ಪುನಿಯಾ ಅವರಿಗೆ ದಿಲ್ಲಿಯ ನ್ಯಾಯಾಲಯವು ಗುರುವಾರ ವಿನಾಯಿತಿ ನೀಡಿದೆ.

ಕುಸ್ತಿ ತರಬೇತುದಾರ ನರೇಶ್ ದಹಿಯಾ ಅವರು ಪುನಿಯಾ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು. ಮುಂಬರುವ ಏಶ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ತರಬೇತಿಗಾಗಿ ಬಜರಂಗ್ ಪುನಿಯಾ ಅವರು ಕಿರ್ಗಿಝ್ಸ್ತಾನಕ್ಕೆ ತೆರಳಿರುವುದರಿಂದ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವುದಕ್ಕೆ ವಿನಾಯಿತಿ ನೀಡಬೇಕೆಂದು ಅವರ ವಕೀಲರು ಮಾಡಿದ ಮನವಿಯನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪುರಸ್ಕರಿಸಿದರು.

ಇದಕ್ಕೂ ಮೊದಲು ಸೆಪ್ಟೆಂಬರ್ 6ರಂದು ಪುನಿಯಾ ಅವರಿಗೆ ವೈದ್ಯಕೀಯ ಕಾರಣಗಳಿಗಾಗಿ ನ್ಯಾಯಾಲಯಕೆ ್ಕ ಖುದ್ದಾಗಿ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿತ್ತು. ಪುನಿಯಾ ಅವರು ಜ್ವರದಿಂದ ಬಳಲುತ್ತಿರುವುದರಿಂದ ಅವರಿಗೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಬೇಕೆಂದು ಅವರ ವಕೀಲರು ಕೋರಿದ್ದರು. ಪುನಿಯಾ ಅವರು ಕೋಚ್ ನರೇಶ್ ದಹಿಯಾ ಅವರ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಸೆಪ್ಟೆಂಬರ್ 6ರಂದು ನ್ಯಾಯಾಲಯದ ಮುಂದೆ ಹಾಜರಾಗಬೇಕೆಂದು ನ್ಯಾಯಾಧೀಶರು ಆಗಸ್ಟ್ 3ರಂದು ಪುನಿಯಾ ಅವರಿಗೆ ಸೂಚಿಸಿದ್ದರು.

ಭಾರತೀಯ ಕುಸ್ತಿ ಫೆಡರೇಶನ್ನ ನಿರ್ಗಮನ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ಭೂಷಣ್ ಸಿಂಗ್ ವಿರುದ್ಧ ಕೆಲವು ಮಹಿಳಾ ಕುಸ್ತಿಪಟುಗಳು ಜಂತರ್ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಮೇ 10ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಪುನಿಯಾ ಅವರು ನರೇಶ್ ದಹಿಯಾ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದರೆಂದು ಆರೋಪಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News