ದಿಲ್ಲಿ: 2022-23ರಲ್ಲಿ ಅವಧಿ ಮೀರಿದ 1.4 ಲಕ್ಷ ವಾಹನಗಳು ಗುಜರಿಗೆ

Update: 2024-01-12 15:35 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಸಾಂಖ್ಯಿಕ ಕೈಪಿಡಿ-2023ರ ಪ್ರಕಾರ, ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 2021-22ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 2022-23ರಲ್ಲಿ 1.40 ಲಕ್ಷಕ್ಕೂ ಹೆಚ್ಚು ಅವಧಿ ಮೀರಿದ ವಾಹನಗಳನ್ನು ಗುಜರಿಗೆ ಹಾಕಲಾಗಿದೆ. 2021-22ರ ಅವಧಿಯಲ್ಲಿ ಕೇವಲ 4,923 ಅವಧಿ ಮೀರಿದ ವಾಹನಗಳನ್ನು ಗುಜರಿಗೆ ಹಾಕಲಾಗಿತ್ತು ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಾಷ್ಟ್ರ ರಾಜಧಾನಿ ದಿಲ್ಲಿಯ ಸಮಾಜೋ-ಆರ್ಥಿಕ ಮಾನದಂಡಗಳನ್ನು ಕುರಿತ ಕೈಪಿಡಿಯನ್ನು ದಿಲ್ಲಿ ಸರ್ಕಾರದ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯು ಬಿಡುಗಡೆಗೊಳಿಸಿದೆ.

ಆಗಸ್ಟ್, 2020ರಲ್ಲಿ ಹೊರಡಿಸಿದ್ದ ಅಧಿಸೂಚನೆಯ ಪ್ರಕಾರ, 2024ರ ವೇಳೆಗೆ ದಿಲ್ಲಿಯಲ್ಲಿ ಶೇ. 25ರಷ್ಟು ವಿದ್ಯುತ್ ಚಾಲಿತ ವಾಹನಗಳ ಸಂಚಾರದತ್ತ ದಿಲ್ಲಿ ಸರ್ಕಾರದ ವಿದ್ಯುತ್ ಚಾಲಿತ ವಾಹನಗಳ ನೀತಿಯು ಗುರಿ ಇಟ್ಟಿತ್ತು.

ಈ ನೀತಿಯನ್ವಯ ಸಹಾಯ ಧನವನ್ನೂ ರದ್ದುಗೊಳಿಸುವ ಅವಕಾಶ ನೀಡಲಾಗಿತ್ತು. ಈ ನೀತಿಯು ಕಳೆದ ವರ್ಷವೇ ಅವಧಿ ಮೀರಿದ್ದರೂ, ಹಲವಾರು ಬಾರಿ ವಿಸ್ತರಣೆಗೀಡಾಗಿತ್ತು. ವಿದ್ಯುತ್ ಚಾಲಿತ ವಾಹನ ನೀತಿ 2.0 ಇನ್ನೂ ಅಸ್ತಿತ್ವದಲ್ಲಿರುವುದರಿಂದ ಇತ್ತೀಚೆಗೆ ಸಹಾಯ ಧನವನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗಿತ್ತು.

ದಾಖಲೆಗಳ ಪ್ರಕಾರ, 2021-22ರ ಆರ್ಥಿಕ ವರ್ಷದಲ್ಲಿ ಕೇವಲ 4,923 ವಾಹನಗಳು ಗುಜರಿ ಸೇರಿದ್ದರೆ, 2022-23ರಲ್ಲಿ 1,40,342 ವಾಹನಗಳು ಗುಜರಿ ಸೇರಿವೆ.

2022-23ನೇ ಆರ್ಥಿಕ ವರ್ಷದಲ್ಲಿ ಸರಿಸುಮಾರು 53,95,838 ಅವಧಿ ಮೀರಿದ ವಾಹನಗಳ ನೋಂದಣಿಯನ್ನು ರದ್ದುಗೊಳಿಸಲಾಗಿದ್ದರೆ, 2021-22ನೇ ಆರ್ಥಿಕ ವರ್ಷದಲ್ಲಿ 48,77,646 ಅವಧಿ ಮೀರಿದ ವಾಹನಗಳ ನೋಂದಣಿಯನ್ನು ರದ್ದುಗೊಳಿಸಲಾಗಿದೆ.

ದಾಖಲೆಗಳ ಪ್ರಕಾರ, 2022-23ನೇ ಆರ್ಥಿಕ ವರ್ಷದಲ್ಲಿ 6,23,034 ನೋಂದಣಿ ರದ್ದುಗೊಂಡ ವಾಹನಗಳನ್ನು ಇತರೆ ರಾಜ್ಯಗಳಿಗೆ ಸ್ಥಳಾಂತರಿಸಲು ನಿರಾಕ್ಷೇಪಣಾ ಪತ್ರವನ್ನು ಪಡೆಯಲಾಗಿದ್ದರೆ, 2021-22ನೇ ಆರ್ಥಿಕ ವರ್ಷದಲ್ಲಿ 83,240 ನೋಂದಣಿ ರದ್ದುಗೊಂಡ ವಾಹನಗಳೂ ಇದೇ ರೀತಿ ನಿರಾಕ್ಷೇಪಣಾ ಪತ್ರ ಪಡೆದುಕೊಂಡಿವೆ.

ಇದಕ್ಕೂ ಮುನ್ನ, 2018ರಲ್ಲಿ ಸುಪ್ರೀಂ ಕೋರ್ಟ್, ಕ್ರಮವಾಗಿ 10 ಮತ್ತು 15 ವರ್ಷ ಹಳೆಯದಾದ ಡೀಸೆಲ್ ಮತ್ತು ಪೆಟ್ರೋಲ್ ಚಾಲಿತ ವಾಹನಗಳನ್ನು ದಿಲ್ಲಿಯಲ್ಲಿ ನಿಷೇಧಿಸಿತ್ತು. ಈ ಆದೇಶವನ್ನು ಉಲ್ಲಂಘಿಸಿ ಸಂಚರಿಸುವ ವಾಹನಗಳನ್ನು ವಶಪಡಿಸಿಕೊಳ್ಳಬಹುದು ಎಂದೂ ತನ್ನ ಆದೇಶದಲ್ಲಿ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News