ಕೇಜ್ರಿವಾಲ್ ಅವರನ್ನು ಸಿಎಂ ಸ್ಥಾನದಿಂದ ವಜಾಗೊಳಿಸುವಂತೆ ಕೋರಿದ ಪಿಐಎಲ್ ತಿರಸ್ಕೃರಿಸಿದ ದಿಲ್ಲಿ ನ್ಯಾಯಾಲಯ
ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾದ ಹಿನ್ನೆಲೆಯಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನು ದಿಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.
‘‘ಕೆಲವು ಸಂದರ್ಭಗಳಲ್ಲಿ ವೈಯುಕ್ತಿಕ ಹಿತಾಸಕ್ತಿಗಿಂತ ರಾಷ್ಟ್ರೀಯ ಹಿತಾಸಕ್ತಿ ಮುಖ್ಯವಾಗಿರಬೇಕು. ನ್ಯಾಯಾಲಯವಾಗಿ ನಾವು ಕಾನೂನಿನ ಚೌಕಟ್ಟಿನೊಳಗೆ ಕಾರ್ಯ ನಿರ್ವಹಿಸಬೇಕು. ನೀವು ಹೇಳಿದಂತೆ ಪರಿಹಾರ ಒದಗಿಸಲು ಸಾಧ್ಯವಿಲ್ಲ. ಆದುದರಿಂದ ನೀವು ಕಾನೂನಿನ ಚೌಕಟ್ಟಿನೊಳಗೆ ಸೂಕ್ತ ಪ್ರಾಧಿಕಾರದ ಮುಂದೆ ಹೋಗಿ’’ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಹಾಗೂ ನ್ಯಾಯಮೂರ್ತಿ ಮನ್ಮೀತ್ ಪಿ.ಎಸ್. ಅರೋರಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿದೆ.
ಅರವಿಂದ ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ಸಾಮಾಜಿಕ ಹೋರಾಟಗಾರ ಹಾಗೂ ಹಿಂದೂ ಸೇನಾದ ರಾಷ್ಟ್ರಾಧ್ಯಕ್ಷ ವಿಷ್ಣು ಗುಪ್ತ ಈ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್) ಸಲ್ಲಿಸಿದ್ದರು.
ಕೇಜ್ರಿವಾಲ್ ಅವರು ಮಾರ್ಚ್ 21ರಂದು ಬಂಧಿತರಾಗಿದ್ದಾರೆ. ದಿಲ್ಲಿಯಲ್ಲಿ ಸರಕಾರ ಇಲ್ಲ. ನಂಬಿಕೆಯ ಸಾಂವಿಧಾನಿಕ ಉಲ್ಲಂಘನೆ ಮೂಲಕ ಕೇಜ್ರಿವಾಲ್ ಅವರು ತಪ್ಪೆಸಗಿದ್ದಾರೆ. ಅವರಿಗೆ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವ ಅರ್ಹತೆ ಇಲ್ಲ. ಈ ಹುದ್ದೆಗೆ ಆಮ್ ಆದ್ಮಿ ಪಕ್ಷದ ಬೇರೆ ಯಾರನ್ನಾದರೂ ನೇಮಕ ಮಾಡಿ ಎಂದು ಅವರ ಪರ ವಕೀಲರು ವಾದಿಸಿದ್ದರು.
ಇದಕ್ಕೆ ನ್ಯಾಯಾಲಯ, ಈ ವಿಷಯದಲ್ಲಿ ನಾವು ಮಧ್ಯೆ ಪ್ರವೇಶಿಸಲು ಸಾಧ್ಯವಿಲ್ಲ. ಸರಕಾರ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ನಾವು ಘೋಷಿಸಬೇಕೇ? ರಾಜ್ಯಪಾಲರು ಸಂಪೂರ್ಣ ಸಮರ್ಥರಿದ್ದಾರೆ. ಅವರಿಗೆ ನಮ್ಮ ಸಲಹೆಯ ಅಗತ್ಯ ಇಲ್ಲ ಎಂದು ಹೇಳಿತು.
ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಇದೇ ರೀತಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ತೀಚೆಗೆ ವಜಾಗೊಳಿಸಲಾಗಿದೆ. ಆದುದರಿಂದ ಈ ಅರ್ಜಿಯನ್ನು ಭಿನ್ನ ದೃಷ್ಟಿಕೋನದಿಂದ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.
ಅರ್ಜಿಯನ್ನು ಹಿಂಪಡೆಯಲು ಅರ್ಜಿದಾರರಿಗೆ ಅವಕಾಶ ನೀಡಿದ ನ್ಯಾಯಾಲಯ ಅರ್ಜಿಯನ್ನು ವಿಲೇವಾರಿ ಮಾಡಿತು.