ದಿಲ್ಲಿ ಅಬಕಾರಿ ನೀತಿ ಪ್ರಕರಣ: ಒಬ್ಬರನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಜಾಮೀನು
ಹೊಸ ದಿಲ್ಲಿ: ಶುಕ್ರವಾರ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡುವ ಮೂಲಕ ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿತರಾಗಿದ್ದವರ ಪೈಕಿ ಒಬ್ಬರನ್ನು ಹೊರತುಪಡಿಸಿ, ಉಳಿದೆಲ್ಲರೂ ಜೈಲಿನಿಂದ ಬಿಡುಗಡೆಯಾದಂತಾಗಿದೆ. ಆದರೆ, ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಅಮನ್ ದೀಪ್ ದಾಲ್ ಅವರಿಗೆ ಮಾತ್ರ ಇದುವರೆಗೂ ಜಾಮೀನು ದೊರೆತಿಲ್ಲ.
ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳಿಗೆ ಕಳೆದ ಕೆಲವು ತಿಂಗಳಿನಿಂದ ನ್ಯಾಯಾಲಯಗಳಿಂದ ಜಾಮೀನು ದೊರೆಯತೊಡಗಿದೆ. ಈ ಪೈಕಿ ಹೈದರಾಬಾದ್ ಉದ್ಯಮಿ ಅಭಿಷೇಕ್ ಬೋಯಿನ್ ಪಲ್ಲಿ, ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್, ದಿಲ್ಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯ, BRS ನಾಯಕಿ ಕೆ. ಕವಿತಾ, ಆಪ್ ಪಕ್ಷದ ಮಾಜಿ ಸಂವಹನ ಉಸ್ತುವಾರಿ ವಿಜಯ್ ನಾಯರ್, ಸಂಸದ ಮಗುಂಟ ಶ್ರೀನಿವಾಸುಲು ರೆಡ್ಡಿಯವರ ಪುತ್ರ ರಾಘವ್ ಮಗುಂಟ ಹಾಗೂ ಅರಬಿಂದೊ ಫಾರ್ಮಾದ ನಿರ್ದೇಶಕ ಶರತ್ ಚಂದ್ರ ರೆಡ್ಡಿ ಅವರಿಗೆ ಜಾಮೀನು ದೊರೆತಿದೆ. ಆದರೆ, ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಅಮನ್ ದೀಪ್ ದಾಲ್ ಅವರಿಗೆ ಮಾತ್ರ ಇದುವರೆಗೆ ಜಾಮೀನು ದೊರೆತಿಲ್ಲ.
ನ್ಯಾಯಾಲಯಗಳು ಆರೋಪಿಗಳ ವಿಚಾರಣಾಪೂರ್ವ ಕಾರಾಗೃಹವಾಸ ಹಾಗೂ ಅಬಕಾರಿ ನೀತಿ ಪ್ರಕರಣದಲ್ಲಿ ವಿಚಾರಣೆ ಸದ್ಯದಲ್ಲೇ ಪೂರ್ಣಗೊಳ್ಳುವ ಯಾವುದೇ ಲಕ್ಷಣಗಳಿಲ್ಲ ಎಂಬುದನ್ನು ಗಣನೆಗೆ ತೆಗೆದುಕೊಂಡು ಜಾಮೀನು ನೀಡಬೇಕಾದ ಅನಿವಾರ್ಯತೆಗೆ ಒಳಗಾಗಿವೆ. ಈ ಪ್ರಕರಣದಲ್ಲಿ ಹಲವಾರು ರಾಜಕೀಯ ನಾಯಕರ ಬಂಧನವಾಗಿದ್ದು, ನ್ಯಾಯಾಲಯವು ಸಿಬಿಐ ಮತ್ತು ಈಡಿಯ ಉದ್ದೇಶ ಮತ್ತು ತನಿಖೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದೆ.
ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು ಆದ ನಂತರ ಕೇವಲ ಅಮನ್ ದೀಪ್ ದಾಲ್ ಮಾತ್ರ ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಇನ್ನೂ ಜಾಮೀನು ದೊರೆಯದೆ, ಪೊಲೀಸರ ವಶದಲ್ಲಿದ್ದಾರೆ ಎಂದು ವರದಿಯಾಗಿದೆ.