ದಿಲ್ಲಿ ಅಬಕಾರಿ ನೀತಿ ಪ್ರಕರಣ ಬಿಆರ್ ಎಸ್ ನಾಯಕಿ ಕವಿತಾಗೆ ಜಾಮೀನು ನಿರಾಕರಣೆ
Update: 2024-05-06 16:02 GMT
ಹೊಸದಿಲ್ಲಿ : ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ಹಾಗೂ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಿಆರ್ಎಸ್ ನಾಯಕಿ ಕೆ. ಕವಿತಾ ಅವರು ಸಲ್ಲಿಸಿದ ಜಾಮೀನು ಅರ್ಜಿಯನ್ನು ಇಲ್ಲಿನ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.
ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಕ್ಕಿರುವ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಕವಿತಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು. ಅಲ್ಲದೆ, ಜಾಮೀನು ನೀಡಲು ಇದು ಸೂಕ್ತವಾದ ಹಂತವಲ್ಲ ಎಂದು ಅಭಿಪ್ರಾಯಿಸಿದರು.
ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ದಾಖಲಿಸಿದ ಎರಡೂ ಪ್ರಕರಣಗಳಲ್ಲಿ ಕವಿತಾ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಕವಿತಾ (46) ಅವರನ್ನು ಹೈದರಾಬಾದ್ ನ ಅವರ ಬಂಜಾರ ಹಿಲ್ಸ್ ನಿವಾಸದಿಂದ ಬಂಧಿಸಿತ್ತು. ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಸಿಬಿಐ ಕವಿತಾ ಅವರನ್ನು ನ್ಯಾಯಾಂಗ ಬಂಧನದಿಂದ ಬಂಧಿಸಿತ್ತು.