ದಿಲ್ಲಿ ಅಬಕಾರಿ ನೀತಿ ಹಗರಣ: ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು
ಹೊಸದಿಲ್ಲಿ: ಬಹುಕೋಟಿಯ ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಜಾಮೀನು ಕೋರಿ ದಿಲ್ಲಿಯ ಮಾಜಿ ಸಚಿವ ಮನೀಶ್ ಸಿಸೋಡಿಯಾ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಜುಲೈ 14ರಂದು ವಿಚಾರಣೆ ನಡೆಸಲಿದೆ.
ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಈ.ಡಿ.) ದಾಖಲಿಸಿದ ಪ್ರಕರಣದಲ್ಲಿ ಜಾಮೀನು ನೀಡಲು ನಿರಾಕರಿಸಿ ದಿಲ್ಲಿ ಉಚ್ಚ ನ್ಯಾಯಾಲಯ ನೀಡಿದ ಆದೇಶ ಪ್ರಶ್ನಿಸಿ ಈಗ ಜೈಲಿನಲ್ಲಿರುವ ಸಿಸೋಡಿಯಾ ಅವರು ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದ್ದರು.
ಸಿಸೋಡಿಯಾ ಅವರ ಮನವಿಯನ್ನು ಹಿರಿಯ ನ್ಯಾಯವಾದಿ ಎ.ಎಂ. ಸಿಂಘ್ವಿ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಹಾಗೂ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರನ್ನು ಒಳಗೊಂಡ ಪೀಠದ ಮುಂದೆ ಸಲ್ಲಿಸಿದರು. ಮನವಿಯನ್ನು ಪರಿಗಣಿಸುವಂತೆ ಆಗ್ರಹಿಸಿದ ಅವರು, ‘‘ಸಿಸೋಡಿಯಾ ಅವರ ಪತ್ನಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಸಾಧ್ಯವಾದರೆ ಮನವಿಯನ್ನು ಜುಲೈ 14ಕ್ಕೆ ವಿಚಾರಣೆಗೆ ತೆಗೆದುಕೊಳ್ಳಿ’’ ಎಂದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ನ ಪೀಠ ಸಿಸೋಡಿಯಾ ಅವರ ಮನವಿ ವಿಚಾರಣೆಗೆ ಒಪ್ಪಿಕೊಂಡಿತು.
ದಿಲ್ಲಿ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಿಸೋಡಿಯಾ ಅವರ ವಿರುದ್ಧ 2022 ಆಗಸ್ಟ್ನಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಇದಕ್ಕೆ ಅನುಸಾರವಾಗಿ ಸಿಬಿಐ ಅವರನ್ನು ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿ ಫೆಬ್ರವರಿ 26ರಂದು ಬಂಧಿಸಿತ್ತು.