ದಿಲ್ಲಿ ಜ್ಯುವೆಲ್ಲರಿ ಮಳಿಗೆ ದರೋಡೆ: ಪ್ರಕರಣದ ಆರೋಪಿ ಚತ್ತೀಸ್ ಗಢದಲ್ಲಿ ಬಂಧನ
ಚತ್ತೀಸ್ ಗಡ : ಹೊಸದಿಲ್ಲಿಯ ಜ್ಯುವೆಲ್ಲರಿ ಮಳಿಗೆಯೊಂದರಲ್ಲಿ 20 ಕೋಟಿ ರೂ. ಮೌಲ್ಯದ ಆಭರಣಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಚತ್ತೀಸ್ ಗಡ ಪೊಲೀಸರು ಶನಿವಾರ ಇಬ್ಬರನ್ನು ಬಂಧಿಸಿದ್ದಾರೆ. ಅವರಿಂದ 18.5 ಕೆ.ಜಿ. ಚಿನ್ನ ಹಾಗೂ ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಚತ್ತೀಸ್ ಗಡದ ಬಿಲಾಸಪುರ ನಗರದಲ್ಲಿ ನಡೆದಿರುವ ಸರಣಿ ಕಳ್ಳತನಗಳ ತನಿಖೆ ನಡೆಸುತ್ತಿರುವ ಜಿಲ್ಲಾ ಅಪರಾಧ ನಿಗ್ರಹ ದಳ , ಸೈಬರ್ ಪೊಲೀಸ್ ಘಟಕ ಹಾಗೂ ನಾಗರಿಕ ಪೊಲೀಸ್ ಠಾಣೆ ಅಧಿಕಾರಿಗಳ ಜಂಟಿ ತಂಡವೊಂದು ದಿಲ್ಲಿ ಜ್ಯುವೆಲ್ಲರಿ ಮಳಿಗೆ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸಿದೆಯೆಂದು ಬಿಲಾಸಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಸಂತೋಷ್ ಸಿಂಗ್ ತಿಳಿಸಿದ್ದಾರೆ.
ಬಿಲಾಸಪುರದಲ್ಲಿ ಹಲವಾರು ಕಳವು ಪ್ರಕರಣಗಲ್ಲಿ ಶಾಮೀಲಾಗಿದ್ದನೆನ್ನಲಾದ ಲೋಕೇಶ್ ಶ್ರೀವಾಸ್ (32)ಹಾಗೂ ಶಿವಚಂದ್ರವಂಶಿ (23) ಬಂಧಿತ ಆರೋಪಿಗಳೆಂದು ಅವರು ತಿಳಿಸಿದ್ದಾರೆ.
ಶ್ರೀವಾಸ್ ನಿಂದ ವಶಪಡಿಸಿಕೊಳ್ಳಲಾದ ಚಿನ್ನ ಹಾಗೂ ವಜ್ರದ ಆಭರಣಗಳ ಮೌಲ್ಯವು 12 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಅದರೆ ಅವುಗಳ ನಿಖರ ಮೌಲ್ಯವನ್ನು ಇನ್ನಷ್ಟೇ ದೃಢೀಕರಿಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚತ್ತೀಸ್ಗಡದ ಕವಾರ್ದಾ ಪಟ್ಟಣದಲ್ಲಿ ಶ್ರೀವಾಸ್ ಇರುವ ಬಗ್ಗೆ ಮಾಹಿತಿ ದೊರೆತ ಪೊಲೀಸರು ಬುಧವಾರ ಅಲ್ಲಿ ದಾಳಿ ನಡೆಸಿದ್ದರು. ಆತನ ಸಂಗಡಿಗ ಚಂದ್ರವಂಶಿಯನ್ನು 23 ಕೋಟಿ ರೂ. ಮೌಲ್ಯದ ಚಿನ್ನ, ವಜ್ರದ ಆಭರಣಗಳೊಂದಿಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಶ್ರೀವಾಸ್ ಅಲ್ಲಿಂದ ತಪ್ಪಿಸಿಕೊಂಡಿದ್ದ.
ಶನಿವಾರ ಚತ್ತೀಸ್ ಗಡದ ಸ್ಮತಿನಗರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಶ್ರೀವಾಸ್ ನನ್ನು ಬಂಧಿಸಿದ್ದು, ಆತನಿಂದ 18.5 ಕೆ.ಜಿ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಆಭರಣಗಳನ್ನು ಹೊಸದಿಲ್ಲಿಯ ಜ್ಯುವೆಲ್ಲರಿ ಮಳಿಗೆಯಿಂದ ಅಪಹರಿಸಿರುವುದು ತನಿಖೆಯಿಂದ ತಿಳಿದುಬಂದಿದೆ.
ದಿಲ್ಲಿಗೆ ಏಕಾಂಗಿಯಾಗಿ ಆಗಮಿಸಿದ್ದ ಆತ, ಸುಮಾರು ಒಂದು ತಿಂಗಳ ಕಾಲ ಜ್ಯುವೆಲ್ಲರಿ ಮಳಿಗೆಯ ಸ್ಥಳಪರಿಶೀಲನೆ (ರೆಕಿ) ನಡೆಸಿದ್ದ. ಸಮೀಪದ ಕಟ್ಟಡದಿಂದ ಚಿನ್ನಾಭರಣದ ಅಂಗಡಿಗೆ ಆತ ಕನ್ನಕೊರೆದಿದ್ದ. ಇಡೀ ರಾತ್ರಿ ಜ್ಯುವೆಲ್ಲರಿ ಅಂಗಡಿಯಲ್ಲಿ ಉಳಿದುಕೊಂಡು ದರೋಡೆ ನಡೆಸಿದ್ದನೆನ್ನಲಾಗಿದೆ.
ಕುಖ್ಯಾತ ಚಿನ್ನಾಭರಣ ಕಳ್ಳರ ಕುರಿತಾಗಿ ಇಂಟರ್ನೆಟ್ ನಲ್ಲಿ ಪೊಲೀಸರು ಶೋಧಿಸಿದಾಗ ಆರೋಪಿ ಲೋಕೇಶ್ ಶ್ರೀವಾಸ್ ನ ಛಾಯಾಚಿತ್ರವೂ ಲಭ್ಯವಾಗಿತ್ತು. ಸಿಸಿಟಿವಿ ವೀಡಿಯೊಗಳನ್ನು ಪರಿಶೀಲಿಸಿದಾಗ ಬಿಳಿಶರ್ಟ್ ಹಾಗೂ ಕಪ್ಪು ಕಪ್ಪು ಪ್ಯಾಂಟ್ ಧರಿಸಿದ್ದ ಲೋಕೇಶ್ ಶ್ರೀವಾಸ್ ಕಳೆದ ರವಿವಾರ ಭೋಗಲ್ ಮಾರುಕಟ್ಟೆಯಲ್ಲಿ ಕಪ್ಪು ಬ್ಯಾಗ್ ಒಂದನ್ನು ಹಿಡಿದುಕೊಂಡು ಹೋಗುತ್ತಿರುವುದು ಕಂಡುಬಂದಿತ್ತು’’ ಎಂದು ದಿಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಿಲ್ಲಿ ಜ್ಯುವೆಲ್ಲರಿ ಮಳಿಗೆ ದರೋಡೆ ಪ್ರಕರಣವನ್ನು ಭೇದಿಸಲು ಹಲವಾರು ತಂಡಗಳನ್ನು ರಚಿಸಲಾಗಿತ್ತು. ನೂರಾರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿತ್ತು. ಕಪ್ಪುಬಣ್ಣದ ಬ್ಯಾಗ್ ಧರಿಸಿದ ವ್ಯಕ್ತಿಯೊಬ್ಬ ರವಿವಾರ ರಾತ್ರಿ ಸಮೀಪದ ಕಟ್ಟಡವನ್ನು ಪ್ರವೇಶಿಸಿರುವುದು ಕಂಡುಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ದರೋಡೆ ಕೃತ್ಯವನ್ನು ಶ್ರೀವಾಸ್ ಎಸಗಿರುವುದು ದೃಢಪಟ್ಟ ಬೆನ್ನಲ್ಲೇ ತಕ್ಷಣವೇ ಐಎಸ್ ಬಿಟಿ, ಪೊಲೀಸರನ್ನು ಚತ್ತೀಸ್ ಗಡಕ್ಕೆ ಕಳುಹಿಸಲಾಗಿತ್ತು. ಬಿಲಾಯಿ ನಗರದಲ್ಲಿ ಶ್ರೀವಾಸ್ ಪತ್ತೆಯಾಗಿದ್ದು, ಆತನನ್ನು ದಿಲ್ಲಿ ಹಾಗೂ ಬಿಲಾಸ್ಪುರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.