1984ರ ಸಿಖ್ ವಿರೋಧಿ ದಂಗೆಯಲ್ಲಿ ಬದುಕುಳಿದವರಿಗೆ ಉದ್ಯೋಗ ನೇಮಕಾತಿಯಲ್ಲಿ ವಿನಾಯಿತಿ ಮಂಜೂರು ಮಾಡಿದ ದಿಲ್ಲಿ ಲೆಫ್ಟಿನೆಂಟ್ ಗವರ್ನರ್
ಹೊಸದಿಲ್ಲಿ: ದಿಲ್ಲಿ ಸರಕಾರದಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿರುವ ಸಿಖ್ ವಿರೋಧಿ ದಂಗೆಯಲ್ಲಿ ಬದುಕುಳಿದಿರುವ ಎಲ್ಲ 88 ಅರ್ಜಿದಾರರಿಗೆ ವಿದ್ಯಾರ್ಹತೆ ಹಾಗೂ ವಯೋಮಾನದಲ್ಲಿ ವಿನಾಯಿತಿ ನೀಡುವ ಪ್ರಸ್ತಾವವನ್ನು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅನುಮೋದಿಸಿದ್ದಾರೆ ಎಂದು ರವಿವಾರ ರಾಜ್ ನಿವಾಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಜಿದಾರರಿಗೆ ಅಗತ್ಯ ವಿದ್ಯಾರ್ಹತೆಯಲ್ಲಿ ಸಂಪೂರ್ಣ ವಿನಾಯಿತಿ ಮಂಜೂರು ಮಾಡಲಾಗಿದ್ದು, ಎಲ್ಲ 88 ಅರ್ಜಿದಾರರಿಗೆ ಗರಿಷ್ಠ ವಯೋಮಾನ ಮಿತಿಯನ್ನು 55 ವರ್ಷದವರೆಗೆ ಏರಿಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಸರಕಾರದ ವಿವಿಧ ಇಲಾಖೆಗಳಲ್ಲಿ ಬಹುಕಾರ್ಯ ಸಿಬ್ಬಂದಿಯನ್ನಾಗಿ ನೇಮಕ ಮಾಡಿಕೊಳ್ಳಲು ಅವಕಾಶ ನೀಡುವ ಈ ವಿನಾಯಿತಿಗೆ ಅನುಮೋದನೆ ನಿಡಲಾಗಿದೆ.
“ಈ ವಿಷಯದ ಕುರಿತು ಇತ್ತೀಚೆಗೆ ಲೆಫ್ಟಿನೆಂಟ್ ಗವರ್ನರ್ ರನ್ನು ಭೇಟಿ ಮಾಡಿದ್ದ ದಿಲ್ಲಿ ಸಿಖ್ ಗುರುದ್ವಾರ ವ್ಯವಸ್ಥಾಪಕ ಸಮಿತಿ, ಸಾರ್ವಜನಿಕ ಪ್ರತಿನಿಧಿಗಳು ಹಾಗೂ ಸಂತ್ರಸ್ತರ ಗುಂಪುಗಳು ಪುನರಾವರ್ತಿತ ಮನವಿ ಮಾಡಿದ್ದವು” ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ಬಿಡುಗಡೆ ಮಾಡಿರುವ ಟಿಪ್ಪಣಿಯಲ್ಲಿ ಹೇಳಲಾಗಿದೆ.
1984ರಲ್ಲಿ ನಡೆದಿದ್ದ ಸಿಖ್ ವಿರೋಧಿ ದಂಗೆಯಲ್ಲಿ ಬದುಕುಳಿದಿರುವವರಿಗೆ ಜನವರಿ 16, 2006ರಲ್ಲಿ ಉದ್ಯೋಗಾವಕಾಶ ಸೇರಿದಂತೆ ಪುನರ್ವಸತಿ ಪ್ಯಾಕೇಜ್ ಅನ್ನು ಕೇಂದ್ರ ಗೃಹ ಸಚಿವಾಲಯ ಮಂಜೂರು ಮಾಡಿತ್ತು.