ಸಾಲ ವಾಪಸ್ ನೀಡಿಲ್ಲ ಎಂದು ಪೊಲೀಸ್ ಅಧಿಕಾರಿಯ ಪುತ್ರನನ್ನು ಕಾಲುವೆಗೆ ದೂಡಿ ಹತ್ಯೆಗೈದ ಸ್ನೇಹಿತರು
ಹೊಸದಿಲ್ಲಿ: ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಇತರ ಇಬ್ಬರೊಂದಿಗೆ ತೆರಳಿದ್ದ ದಿಲ್ಲಿಯ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಯಶ್‌ಪಾಲ್ ಸಿಂಗ್ ಅವರ 24 ವರ್ಷದ ಪುತ್ರ ಲಕ್ಷ್ಯ ಚೌಹಾಣ್ ಕೊಲೆಗೀಡಾಗಿದ್ದು ಮೃತದೇಹ ಕಾಲುವೆಯೊಂದರಲ್ಲಿ ಪತ್ತೆಯಾಗಿದೆ.
ದಿಲ್ಲಿಯ ತೀಸ್ ಹಝಾರಿ ನ್ಯಾಯಾಲಯದ ವಕೀಲರಾಗಿರುವ ಚೌಹಾಣ್ ಅವರನ್ನು ಹರ್ಯಾಣದಲ್ಲಿ ಅವರ ಇಬ್ಬರು ಸ್ನೇಹಿತರಾದ ವಿಕಾಸ್ ಭಾರದ್ವಾಜ್ ಮತ್ತು ಅಭಿಷೇಕ್ ಎಂಬವರು ಕಾಲುವೆಗೆ ದೂಡಿದ್ದಾರೆಂದು ಆರೋಪಿಸಲಾಗಿದೆ. ಹಣಕಾಸಿನ ವಿಚಾರದಲ್ಲಿ ಉಂಟಾದ ವೈಮನಸ್ಸು ಈ ಹತ್ಯೆಗೆ ಕಾರಣವೆಂದು ತಿಳಿಸಯಲಾಗಿದೆ.
ಸೋಮವಾರ ಚೌಹಾಣ್ ಸೋನೆಪತ್‌ನಲ್ಲಿ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಭಾರದ್ವಾಜ್ ಮತ್ತು ಅಭಿಷೇಕ್ ಜೊತೆ ತೆರಳಿದ್ದರು. ಆದರೆ ಮರುದಿನ ಆತ ಮನೆಗೆ ವಾಪಸಾಗದೇ ಇದ್ದಾಗ ಯಶ್‌ಪಾಲ್ ಅವರು ನಾಪತ್ತೆ ದೂರು ಸಲ್ಲಿಸಿದ್ದರು. ತನಿಖೆ ಹಾಗೂ ಶೋಧ ಮುಂದುವರಿದಾಗ ಚೌಹಾಣ್ ತಾನು ಪಡೆದುಕೊಂಡಿದ್ದ ಸಾಲ ವಾಪಸ್ ನೀಡದೇ ಇದ್ದುದರಿಂದ ಆತ ಮತ್ತು ಭಾರದ್ವಾಜ್ ನಡುವಿನ ಸಂಬಂಧ ಹಳಸಿತ್ತು ಎಂದು ತಿಳಿದು ಬಂದಿತ್ತು.
ಮದುವೆ ಕಾರ್ಯಕ್ರಮ ಮುಗಿಸಿ ವಾಪಸ್ ಬರುವಾಗ ಮಧ್ಯರಾತ್ರಿ ಹೊತ್ತಿಗೆ ಮುನಾಕ್ ಕಾಲುವೆ ಸಮೀಪ ಮೂವರೂ ವಾಹನ ನಿಲ್ಲಿಸಿದ್ದರು. ಈ ಸಂದರ್ಭ ತಮ್ಮ ಯೋಜನೆಯಂತೆ ಇತರ ಇಬ್ಬರು ಚೌಹಾಣ್‌ನನ್ನು ಕಾಲುವೆಗೆ ದೂಡಿದ್ದರು.
ದಿಲ್ಲಿಗೆ ವಾಪಸ್ ಬಂದ ಮೇಲೆ ಅಭಿಷೇಕ್‌ನನ್ನು ಭಾರದ್ವಾಜ್ ನರೇಲಾದಲ್ಲಿ ಡ್ರಾಪ್ ಮಾಡಿ ತಪ್ಪಿಸಿಕೊಂಡಿದ್ದ. ನಂತರ ಆತನನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ.