ನ್ಯೂಸ್‌ಕ್ಲಿಕ್ ವಿರುದ್ಧ ಕ್ರಮಕ್ಕಾಗಿ ನಾಲ್ವರು ದಿಲ್ಲಿ ಪೋಲಿಸ್ ಅಧಿಕಾರಿಗಳಿಗೆ ನಿರ್ಬಂಧ ವಿಧಿಸಲು ಅಮೆರಿಕಕ್ಕೆ ಆಗ್ರಹ

Update: 2024-06-03 11:02 GMT

PC : PTI 

ಹೊಸದಿಲ್ಲಿ: ಸುದ್ದಿ ಜಾಲತಾಣ ನ್ಯೂಸ್‌ಕ್ಲಿಕ್‌ನೊಂದಿಗೆ ಗುರುತಿಸಿಕೊಂಡಿರುವ ಪತ್ರಕರ್ತರ ವಿರುದ್ಧ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಗಾಗಿ ದಿಲ್ಲಿಯ ನಾಲ್ವರು ಹಿರಿಯ ಪೋಲಿಸ್ ಅಧಿಕಾರಿಗಳ ಮೇಲೆ ನಿರ್ಬಂಧಗಳನ್ನು ಹೇರುವಂತೆ ಜಾಗತಿಕ ಪತ್ರಿಕೋದ್ಯಮದ ಮೇಲೆ ನಿಗಾಯಿರಿಸುವ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಮತ್ತು ಬ್ರಿಟನ್ನಿನ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಗೆರ್ನಿಕಾ 37 ಚೇಂಬರ್ಸ್ ಅಮೆರಿಕವನ್ನು ಆಗ್ರಹಿಸಿವೆ.

ಈ ಹಿಂದೆ ಇವೆರಡೂ ಸಂಘಟನೆಗಳು ಐರೋಪ್ಯ ಒಕ್ಕೂಟಕ್ಕೂ ಇಂತಹುದೇ ಬೇಡಿಕೆಯನ್ನು ಸಲ್ಲಿಸಿದ್ದವು.

ಪತ್ರಿಕಾ ಪ್ರಕಟಣೆಯಲ್ಲಿ ಆರ್‌ಎಸ್‌ಎಫ್ ಮತ್ತು ಗೆರ್ನಿಕಾ 37 ಚೇಂಬರ್ಸ್,ಭಾರತದಲ್ಲಿ ಪತ್ರಕರ್ತರ ವಿರುದ್ಧ ಈ ಹಿಂದೆಂದೂ ಕಂಡಿರದ ದಾಳಿಗಳಲ್ಲಿ ಭಾಗಿಯಾಗಿದ್ದ ದಿಲ್ಲಿ ಪೋಲಿಸ್‌ನ ವಿಶೇಷ ಘಟಕದ ನಾಲ್ವರು ಅಧಿಕಾರಿಗಳ ವಿರುದ್ಧ ನಿರ್ಬಂಧಗಳನ್ನು ವಿಧಿಸುವಂತೆ ಅಮೆರಿಕದ ವಿದೇಶಾಂಗ ಮತ್ತು ಖಜಾನೆ ಇಲಾಖೆಗಳಿಗೆ ಶಿಫಾರಸುಗಳನ್ನು ಮಾಡಿವೆ.

ನ್ಯೂಯಾರ್ಕ್ ಟೈಮ್ಸ್ 2023ರಲ್ಲಿ ವರದಿಯೊಂದನ್ನು ಪ್ರಕಟಿಸಿದ ನಂತರ ದಿಲ್ಲಿ ಪೋಲಿಸರು ನ್ಯೂಸ್‌ಕ್ಲಿಕ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿ ಎಫ್‌ಐಆರ್ ದಾಖಲಿಸಿದ್ದರು. ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದೊಂದಿಗೆ ನಂಟು ಹೊಂದಿದ್ದಾರೆನ್ನಲಾದ ಅಮೆರಿಕದ ಉದ್ಯಮಿಯೊಬ್ಬರಿಂದ ನ್ಯೂಸ್‌ಕ್ಲಿಕ್ ಹಣವನ್ನು ಪಡೆಯುತ್ತಿದೆ ಎಂದು ವರದಿಯು ಹೇಳಿತ್ತು. ನ್ಯೂಸ್‌ಕ್ಲಿಕ್,ಅದರ ಸಂಪಾದಕರು ಮತ್ತು ಅಮೆರಿಕನ್ ಉದ್ಯಮಿ ಈ ಆರೋಪವನ್ನು ಬಲವಾಗಿ ನಿರಾಕರಿಸಿದ್ದರು.

ದಿಲ್ಲಿ ಪೋಲಿಸ್‌ನ ವಿಶೇಷ ಘಟಕವು ದೇಶಾದ್ಯಂತ 88 ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿ ನ್ಯೂಸ್‌ಕ್ಲಿಕ್‌ಗೆ ಸಂಬಂಧಿಸಿದ 80 ಸಿಬ್ಬಂದಿಗಳು, ಅರೆಕಾಲಿಕ ಉದ್ಯೋಗಿಗಳು ಮತ್ತು ಫ್ರೀಲಾನ್ಸ್ ಪತ್ರಕರ್ತರಿಂದ ಸುಮಾರು 300 ವಿದ್ಯುನ್ಮಾನ ಸಾಧನಗಳನ್ನು ವಶಪಡಿಸಿಕೊಂಡಿತ್ತು.

ನ್ಯೂಸ್‌ಕ್ಲಿಕ್‌ನ ಸಂಪಾದಕ ಪ್ರಬೀರ ಪುರಕಾಯಸ್ಥ ಮತ್ತು ಮಾನವ ಸಂಪನ್ಮೂಲಗಳ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು 2023,ಅ.3ರಂದು ಬಂಧಿಸಲಾಗಿತ್ತು. ಪುರಕಾಯಸ್ಥ ಅವರ ಬಂಧನ ಅಸಿಂಧು ಎಂದು ಸರ್ವೋಚ್ಚ ನ್ಯಾಯಾಲಯವು ಘೋಷಿಸಿದ ಬಳಿಕ 2024,ಮೇ 15ರಂದು ಅವರನ್ನು ಬಿಡುಗಡೆಗೊಳಿಸಲಾಗಿತ್ತು. ಚಕ್ರವರ್ತಿ ಪ್ರಕರಣದಲ್ಲಿ ಮಾಫಿ ಸಾಕ್ಷಿದಾರನಾದ ಬಳಿಕ ಕಳೆದ ತಿಂಗಳು ದಿಲ್ಲಿ ಉಚ್ಚ ನ್ಯಾಯಾಲಯವು ಅವರನ್ನು ಬಂಧಮುಕ್ತಗೊಳಿಸಿದೆ.

ನ್ಯೂಸ್‌ಕ್ಲಿಕ್ ಪತ್ರಕರ್ತರ ವಿರುದ್ಧ ದಿಲ್ಲಿ ಪೋಲಿಸ್ ವಿಶೇಷ ಘಟಕದ ಕ್ರಮಗಳು ಭಾರತದಲ್ಲಿ ಪತ್ರಕರ್ತರ ಮೇಲಿನ ಅತ್ಯಂತ ನಿರ್ಲಜ್ಜ ದಾಳಿಗಳಲ್ಲಿ ಒಂದಾಗಿದೆ ಎಂದು ಆರ್‌ಎಸ್‌ಎಫ್‌ನ ದಕ್ಷಿಣ ಏಶ್ಯಾ ಡೆಸ್ಕ್‌ನ ಸಿಲಿಯಾ ಮರ್ಸಿಯರ್ ಹೇಳಿದ್ದಾರೆ.

ಉಭಯ ಸಂಘಟನೆಗಳು ಕಳೆದ ಮಾರ್ಚ್‌ನಲ್ಲಿ ದಿಲ್ಲಿ ಪೋಲಿಸ್ ಅಧಿಕಾರಿಗಳ ಮೇಲೆ ನಿರ್ಬಂಧ ಹೇರುವಂತೆ ಐರೋಪ್ಯ ದೇಶಗಳಿಗೆ ಕರೆ ನೀಡಿದ್ದವು ಎಂದು ಬೆಟ್ಟು ಮಾಡಿದ ಮರ್ಸಿಯರ್,ಜಾಗತಿಕ ಮ್ಯಾಗ್ನಿಸ್ಕಿ ಕಾಯ್ದೆ(ಮಾನವಹಕ್ಕುಗಳ ಉತ್ತರದಾಯಿತ್ವ ಕಾಯ್ದೆ)ಯಡಿ ನಿರ್ಬಂಧಗಳನ್ನು ಹೇರುವಂತೆ ತಾವು ಅಮೆರಿಕವನ್ನು ಕೋರುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿಯನ್ನುಂಟು ಮಾಡುವವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರು ಇತ್ತೀಚಿಗೆ ಶಪಥ ಮಾಡಿದ್ದಾರೆ. ಈ ಪ್ರಕರಣದಲ್ಲಿ ಅಮೆರಿಕದ ತುರ್ತು ಕ್ರಮವು ಇಡೀ ಜಾಗತಿಕ ಸಮುದಾಯಕ್ಕೆ ಬಲವಾದ ಸಂಕೇತವನ್ನು ಮತ್ತು ಪತ್ರಕರ್ತರ ದಮನ ನಿಲ್ಲಬೇಕು ಎಂದು ಭಾರತೀಯ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ರವಾನಿಸುತ್ತದೆ ಎಂದು ಮರ್ಸಿಯರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2016ರಲ್ಲಿ ಅನುಮೋದಿತ ಮ್ಯಾಗ್ನೆಸ್ಕಿ ಕಾಯ್ದೆಯು ಮಾನವ ಹಕ್ಕುಗಳನ್ನು ಉಲ್ಲಂಘಿಸುವ ವಿದೇಶಿ ಸರಕಾರಿ ಅಧಿಕಾರಿಗಳ ಸೊತ್ತುಗಳನ್ನು ಸ್ತಂಭನಗೊಳಿಸಲು ಮತ್ತು ಅಮೆರಿಕಕ್ಕೆ ಅವರ ಪ್ರಯಾಣವನ್ನು ನಿರ್ಬಂಧಿಸಲು ಆಡಳಿತಕ್ಕೆ ಅವಕಾಶ ನೀಡುತ್ತದೆ.

ನ್ಯೂಸ್‌ಕ್ಲಿಕ್ ಯಾವುದೇ ವಸ್ತುನಿಷ್ಠ ಕಾರಣವಿಲ್ಲದೆ ಅಕ್ರಮವಾಗಿ ಚೀನಿ ಹಣವನ್ನು ಪಡೆದುಕೊಂಡಿದೆ ಎನ್ನುವುದು ಪೋಲಿಸರ ಆರೋಪವಾಗಿದೆ,ಆದರೆ ವಾಸ್ತವಲ್ಲಿ ಅದರ ತನಿಖಾ ವರದಿಗಾರಿಕೆಗಾಗಿ ಅದನ್ನು ಗುರಿಯಾಗಿಸಿಕೊಳ್ಳಲಾಗಿತ್ತು ಎಂದು ಮರ್ಸಿಯರ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಆಪ್ತರಾಗಿರುವ ಗೌತಮ ಅದಾನಿಯವರ ಉದ್ಯಮ ಸಮೂಹದ ವಂಚನೆಗಳನ್ನು ತನಿಖೆ ಮಾಡಿದ್ದ ಹಲವಾರು ಪತ್ರಕರ್ತರು ದಾಳಿಗಳಿಂದಾಗಿ ಕೊಚ್ಚಿಕೊಂಡು ಹೋಗಿದ್ದರು. ಇತರ ಪತ್ರಕರ್ತರನ್ನು ರೈತರ ಪ್ರತಿಭಟನೆಗಳು ಮತ್ತು ಸಿಎಎ ವಿರುದ್ಧ ಪ್ರತಿಭಟನೆಗಳನ್ನು ವರದಿ ಮಾಡಿದ್ದಕ್ಕಾಗಿ ಗುರಿಯಾಗಿಸಿಕೊಳ್ಳಲಾಗಿತ್ತು ಎಂದು ತೋರುತ್ತದೆ ಎಂದು ಮರ್ಸಿಯರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News