ಮೊಬೈಲ್‌ನಲ್ಲಿ ಮಾತಾಡುತ್ತಾ ಕಾರು ಹಿಂದಕ್ಕೆ ಚಲಾಯಿಸಿದ ಚಾಲಕ; ಹತ್ತಿರದಲ್ಲೇ ಆಟವಾಡುತ್ತಿದ್ದ ಮಗು ಬಲಿ
ಬರೇಲಿ: ತನ್ನ ಮೊಬೈಲ್ ಫೋನಿನಲ್ಲಿ ಮಾತನಾಡುವುದರಲ್ಲೇ ತಲ್ಲೀನನಾಗಿದ್ದ ವ್ಯಕ್ತಿಯೊಬ್ಬ ತನ್ನ ಪಾರ್ಕ್ ಮಾಡಿದ್ದ ಕಾರನ್ನು ದಿಢೀರೆಂದು ರಿವರ್ಸ್ ತೆಗೆದಾಗ ಆತನ ಮನೆ ಪಕ್ಕದಲ್ಲಿಯೇ ಆಟವಾಡುತ್ತಿದ್ದ ಮೂರು ವರ್ಷದ ಮಗುವೊಂದು ಕಾರಿನ ಚಕ್ರಗಳಡಿಯಲ್ಲಿ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಶಹಜಹಾನಪುರ ನಗರದಿಂದ ರವಿವಾರ ಸಂಜೆ ವರದಿಯಾಗಿದೆ.
ಮಗು ಮೊಹಮ್ಮದ್ ಉಝೈನ್‌ನ ತಲೆ ಕಾರಿನ ಚಕ್ರದಡಿ ಸಿಲುಕಿ ಅಪ್ಪಚ್ಚಿಯಾದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಘಟನೆ ಬಳಿಕ ಕಾರಿನ ಚಾಲಕ ಮುಹಮ್ಮದ್ ಇರ್ಫಾನ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದರೂ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬ್ಲೂಟೂಥ್ ಇಯರ್ ಫೋನ್ ಬಳಸಿ ಕಾರಿನ ಚಾಲಕ ಮಾತನಾಡುತ್ತಾ ವಾಹನ ಹಿಂದಕ್ಕೆ ಚಲಾಯಿಸಿದ್ದ. ಮಗು ಹತ್ತಿರದಲ್ಲಿ ಆಟವಾಡುತ್ತಿರುವುದನ್ನು ಗಮನಿಸಿ ಜೋರಾಗಿ ನಾವೆಲ್ಲ ಬೊಬ್ಬೆ ಹೊಡೆದರೂ ಆತನಿಗೆ ಕೇಳಿಸಿಲ್ಲ, ಕ್ಷಣಾರ್ಧದಲ್ಲಿ ದುರಂತ ನಡೆದು ಹೋಯಿತು ಎಂದು ಸ್ಥಳೀಯರು ಹೇಳಿದ್ದಾರೆ.
ನಂತರ ಪೊಲೀಸರು ಕಾರನ್ನೂ ವಶಪಡಿಸಿಕೊಂಡರು. ಆದರೆ ಮೃತ ಮಗುವಿನ ತಂದೆ ಯಾವುದೇ ಕ್ರಮಕೈಗೊಳ್ಳುವುದು ಬೇಡ ಎಂದು ಹೇಳಿದ ಕಾರಣ ಚಾಲಕನನ್ನು ಬಿಡುಗಡೆಗೊಳಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.