ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಪ್ರಕರಣ | ಈಡಿಯಿಂದ 388 ಕೋಟಿ ರೂ. ಮೌಲ್ಯದ ಹೊಸ ಸೊತ್ತು ಜಪ್ತಿ
ಮುಂಬೈ : ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿ ಹಣ ಅಕ್ರಮ ವರ್ಗಾವಣೆಯ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ 388 ಕೋಟಿ ರೂ.ಮೌಲ್ಯದ ಹೊಸ ಸೊತ್ತುಗಳನ್ನು ಜಪ್ತಿ ಮಾಡಿದೆ.
ತನಿಖೆ ಚಂಡಿಗಢದ ಉನ್ನತ ಮಟ್ಟದ ರಾಜಕಾರಣಿಗಳು ಹಾಗೂ ಅಧಿಕಾರಶಾಹಿಗಳ ನಂಟನ್ನು ಬಹಿರಂಗಪಡಿಸಿದೆ.
ವಶಪಡಿಸಿಕೊಳ್ಳಲಾದ ಸೊತ್ತುಗಳಲ್ಲಿ ಸ್ಥಿರ ಹಾಗೂ ಚರ ಆಸ್ತಿಗಳು ಸೇರಿವೆ. ಸ್ಥಿರಾಸ್ಥಿಗಳು ಚಂಡಿಗಡ, ಮುಂಬೈ, ಹಾಗೂ ಮಧ್ಯಪ್ರದೇಶಗಳಲ್ಲಿ ಇದೆ. ಅದು ಬೆಟ್ಟಿಂಗ್ ಆ್ಯಪ್ ಪ್ರಚಾರಕರು, ನಿರ್ವಾಹಕರು ಹಾಗೂ ಅವರ ಸಹವರ್ತಿಗಳ ಹೆಸರಿನಲ್ಲಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಹಣ ಅಕ್ರಮ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಡಿಸೆಂಬರ್ 5ರಂದು ತಾತ್ಕಾಲಿಕ ಮುಟ್ಟುಗೋಲು ಆದೇಶವನ್ನು ಜಾರಿಗೊಳಿಸಲಾಗಿತ್ತು.
ತನ್ನ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಇದುವರೆಗೆ ಸ್ತಂಭನಗೊಳಿಸಿದ, ಜಪ್ತಿ ಮಾಡಿದ ಅಥವಾ ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ 2.295.61 ಕೋಟಿ ರೂ. ಈ ಪ್ರಕರಣದಲ್ಲಿ 11 ಜನರನ್ನು ಬಂಧಿಸಲಾಗಿದೆ ಹಾಗೂ 4 ಆರೋಪ ಪಟ್ಟಿಗಳನ್ನು ಸಲ್ಲಿಸಲಾಗಿದೆ.