ರಾಜ್ ಕುಂದ್ರಾಗೆ ಸೇರಿದ 98 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಈಡಿ

Update: 2024-04-18 14:26 GMT

ಹೊಸದಿಲ್ಲಿ: ಹಣ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ಅವರ ಪುಣೆಯಲ್ಲಿರುವ ಬಂಗ್ಲೆ ಹಾಗೂ ಈಕ್ವಿಟಿ ಶೇರ್‌ಗಳ ಸಹಿತ 98 ಕೋ.ರೂ. ಮೌಲ್ಯದ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಗುರುವಾರ ತಿಳಿಸಿದೆ.

ಬಿಟ್ ಕಾಯಿನ್‌ಗಳನ್ನು ಬಳಸುವ ಮೂಲಕ ಹೂಡಿಕೆದಾರರಿಗೆ ಹಣ ವಂಚಿಸಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಜಪ್ತಿ ಮಾಡಲಾದ ಸೊತ್ತುಗಳಲ್ಲಿ ಪ್ರಸ್ತುತ ಶಿಲ್ಪಾ ಶೆಟ್ಟಿ ಅವರ ಹೆಸರಿನಲ್ಲಿ ಜುಹು (ಮುಂಬೈ)ನಲ್ಲಿರುವ ವಸತಿ ಫ್ಲ್ಯಾಟ್, ಪುಣೆಯಿಲ್ಲಿರುವ ವಸತಿ ಬಂಗ್ಲೆ ಹಾಗೂ ರಾಜ್ ಕುಂದ್ರಾ ಅವರ ಹೆಸರಿನಲ್ಲಿರುವ ಈಕ್ವಿಟಿ ಶೇರುಗಳನ್ನು ಒಳಗೊಂಡಿವೆ ಎಂದು ಜಾರಿ ನಿರ್ದೇಶನಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

97.79 ಕೋಟಿ ರೂ. ಮೌಲ್ಯದ ಈ ಸೊತ್ತುಗಳನ್ನು ವಶಪಡಿಸಿಕೊಳ್ಳಲು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನಿಯಮಗಳ ಅಡಿಯಲ್ಲಿ ಈ ತಾತ್ಕಾಲಿಕ ಮುಟ್ಟುಗೋಲು ಆದೇಶವನ್ನು ಜಾರಿಗೊಳಿಸಲಾಗಿದೆ ಎಂದು ಅದು ತಿಳಿಸಿದೆ.

ವೇರಿಯೆಬಲ್ ಟೆಕ್ ಪಿಟಿಇ ಲಿಮಿಟೆಡ್, ದಿ. ಅಮಿತ್ ಭಾರದ್ವಾಜ್, ಅಜಯ್ ಭಾರದ್ವಾಜ್, ವಿವೇಕ್ ಭಾರದ್ವಾಜ್, ಸಿಂಪಿ ಭಾರದ್ವಾಜ್, ಮಹೇಂದ್ರ ಭಾರದ್ವಾಜ್ ಹಾಗೂ ಅಸಂಖ್ಯ ಏಜೆಂಟರ ವಿರುದ್ದ ಮಹಾರಾಷ್ಟ್ರ ಹಾಗೂ ದಿಲ್ಲಿ ಪೊಲೀಸರು ದಾಖಲಿಸಿದ ಎಫ್‌ಐಆರ್‌ನ ಆಧಾರದಲ್ಲಿ ಈ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಿಂಗಳಿಗೆ ಶೇ. 10 ಲಾಭವನ್ನು ಬಿಟ್ ಕಾಯಿನ್‌ಗಳ ಮೂಲಕ ಹಿಂದಿರುಗಿಸುವ ಸುಳ್ಳು ಭರವಸೆಯೊಂದಿಗೆ ಸಾರ್ವಜನಿಕರಿಂದ ಬಿಟ್ ಕಾಯಿನ್ (2017ರಲ್ಲಿ 6,600 ಕೋಟಿ ರೂ. ಮೌಲ್ಯದ) ರೂಪದಲ್ಲಿ ದೊಡ್ಡ ಮೊತ್ತದ ನಿಧಿಯನ್ನು ಅವರು ಸಂಗ್ರಹಿಸಿದ್ದಾರೆ ಆರೋಪಿಸಲಾಗಿದೆ.

ಪ್ರವರ್ತಕರು ಹೂಡಿಕೆದಾರರಿಗೆ ವಂಚಿಸಿದ್ದಾರೆ ಹಾಗೂ ಅಕ್ರಮ ಬಿಟ್‌ಕಾಯಿನ್‌ಗಳನ್ನು ಸುರಕ್ಷಿತ ಆನ್‌ಲೈನ್ ವಾಲೆಟ್‌ನಲ್ಲಿ ಅಡಗಿಸಿ ಇರಿಸುತ್ತಿದ್ದಾರೆ. ಉಕ್ರೈನ್‌ನಲ್ಲಿ ಬಿಟ್ ಕಾಯಿನ್ ಮೈನಿಂಗ್ ಫಾರ್ಮ್ ಅನ್ನು ಆರಂಭಿಸಲು ರಾಜ್ ಕುಂದ್ರಾ ಅವರು ಪ್ರಮುಖ ಸೂತ್ರಧಾರ ಹಾಗೂ ಗೈನ್ ಬಿಟ್ ಕಾಯಿನ್ ಪೋಂಝಿಯ ಪ್ರವರ್ತಕ ಅಮಿತ್ ಭಾರದ್ವಾಜ್ ಅವರಿಂದ 285 ಬಿಟ್ ಕಾಯಿನ್‌ಗಳನ್ನು ಸ್ವೀಕರಿಸಿದ್ದರು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ರಾಜ್ ಕುಂದ್ರಾ ಅವರ ವಶದಲ್ಲಿ ಈಗಲೂ 285 ಬಿಟ್ ಕಾಯಿನ್‌ಗಳು ಇವೆ. ಪ್ರಸ್ತುತ ಇದರ ಮೌಲ್ಯ 150 ಕೋಟಿ ರೂ.ಗಿಂತಲೂ ಅಧಿಕ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News